ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಾಜಿ ಕ್ರಿಕೆಟಿಗ ಹಾಗೂ ಭಾರತ ತಂಡದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಚಿಕಿತ್ಸೆಗೆ ನೆರವು ನೀಡಿ ಎಂದು ಕ್ರಿಕೆಟ್ ದಂತಕತೆ ಕಪಿಲ್ ದೇವ್ ಬಿಸಿಸಿಗೆ ಮನವಿ ಮಾಡಿದ್ದಾರೆ.
ಅಂಶುಮಾನ್ ಗಾಯಕ್ವಾಡ್ 1975ರಿಂದ 1987ರ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿದ್ದು, 40 ಟೆಸ್ಟ್ ಹಾಗೂ 15 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಅಲ್ಲದೇ ಭಾರತ ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
71 ವರ್ಷದ ಅಂಶುಮಾನ್ ಗಾಯಕ್ವಾಡ್ ಬ್ಲಡ್ ಕ್ಯಾನ್ಸರ್ ನಿಂದ ಬಳುತ್ತಿದ್ದು, ಲಂಡನ್ ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಕ್ವಾಡ್ ಅವರಿಗೆ ಹಣಕಾಸಿನ ನೆರವಿನ ಅಗತ್ಯವಿದೆ. ಚಿಕಿತ್ಸೆಗೆ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಅವರಿಗೆ ಬಿಸಿಸಿಐ ನೆರವಾಗಬೇಕು ಎಂದು ಬಿಸಿಸಿಐ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗಾಯಕ್ವಾಡ್ ಅವರ ಚಿಕಿತ್ಸೆಗೆ ಸ್ಪಂದಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಗಾಯಕ್ವಾಡ್ ಚಿಕಿತ್ಸೆಗೆ ನೆರವಾಗಲು ನಾನು, ಮೊಯಿಂದರ್ ಅಮರ್ ನಾಥ್, ಮದನ್ ಲಾಲ್, ರವಿಶಾಸ್ತ್ರಿ, ಕೀರ್ತಿ ಆಜಾದ್, ಸುನೀಲ್ ಗವಾಸ್ಕರ್, ಸಂದೀಪ್ ಪಾಟೀಲ್ ದಿಲೀಪ್ ವೆಂಗ್ ಸರ್ಕಾರ್ ನಮ್ಮ ಕೈಲಾದಷ್ಟು ನೆರವು ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ನಮ್ಮ ಜೊತೆಗೆ ಆಡಿದ ವ್ಯಕ್ತಿಯನ್ನು ಈ ಸ್ಥಿತಿಯಲ್ಲಿ ನೋಡಲು ನಮ್ಮಿಂದ ಆಗುತ್ತಿಲ್ಲ. ನಾನು ತುಂಬಾ ನೋವಿನಲ್ಲಿದ್ದೇನೆ. ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು. ನಾವು ಯಾರನ್ನೂ ನಿಂದಿಸುತ್ತಿಲ್ಲ. ಬದಲಾಗಿ ನೀವು ಏನೆ ನೆರವು ನೀಡಿದರೂ ಅದನ್ನು ಮನಸ್ಸಿನಿಂದ ಮಾಡಿ. ನಾವು ಆತನಿಗಾಗಿ ನಿಲ್ಲುವ ಸಮಯ ಬಂದಿದೆ. ಕ್ರಿಕೆಟ್ ಅಭಿಮಾನಿಗಳು ಅವರ ಪರ ನಿಲ್ಲುತ್ತಾರೆ ಮತ್ತು ಅವನಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಕಪಿಲ್ ದೇವ್ ಭಾವುಕರಾಗಿ ಹೇಳಿದ್ದಾರೆ.