Friday, December 26, 2025
Google search engine
Homeರಾಜ್ಯಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಕ್ರೋಶದ ಬೆನ್ನಲ್ಲೇ ಹಂಪಿ ಸ್ವಚ್ಚತೆಗೆ ಮುಂದಾದ ಅಧಿಕಾರಿಗಳು!

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಕ್ರೋಶದ ಬೆನ್ನಲ್ಲೇ ಹಂಪಿ ಸ್ವಚ್ಚತೆಗೆ ಮುಂದಾದ ಅಧಿಕಾರಿಗಳು!

ವಿಶ್ವ ಪರಂಪರೆಯ ತಾಣವಾದ ಐತಿಹಾಸಿಕ ಹಂಪಿಯಲ್ಲಿ ಎಲ್ಲೆಂದರಲ್ಲಿ ಕಸ, ಗಲೀಜು ಕಂಡ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಕ್ರೋಶಕ್ಕೆ ಬೆಚ್ಚಿದ ಜಿಲ್ಲಾಡಳಿತ ಬೆಳ್ಳಂಬೆಳಗ್ಗೆಯೇ ಸ್ವಚ್ಚತೆ ಕಾರ್ಯ ಕೈಗೆತ್ತಿಕೊಂಡಿತು.

ಭಾನುವಾರ ಹಂಪಿಯ ಐತಿಹಾಸಿಕ ಕೋದಂಡರಾಮ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಮಾರ್ಗ ಮಧ್ಯದಲ್ಲಿ ಮಾನವ ತ್ಯಾಜ್ಯ (ಮಲ) ಸೇರಿದಂತೆ ಅನೈರ್ಮಲ್ಯ ವಾತಾವರಣ ಕಂಡು ಗರಂ ಆಗಿದ್ದಾರೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಸ್ವಚ್ಛತೆ ಮತ್ತು ಒಟ್ಟಾರೆ ನಿರ್ವಹಣೆ ಕುರಿತು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕೇಂದ್ರ ಸಚಿವರ ಅಸಮಾಧಾನದ ಬೆನ್ನಲ್ಲೇ ಜಿಲ್ಲಾಧಿಕಾರಿ ಕವಿತಾ ಎಸ್.ಮುನ್ನಿಕೇರಿ ಹಂಪಿಗೆ ತೆರಳಿ ಪರಿಶೀಲನೆ ನಡೆಸಿದ್ದೂ ಅಲ್ಲದೇ ಕೂಡಲೇ ಸ್ವಚ್ಚತಾ ಕಾರ್ಯ ನಡೆಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಮುನ್ನಿಕೇರಿ ಅಲ್ಲದೇ ತಹಸೀಲ್ದಾರ್ ಶ್ರುತಿ ಎಂ.ಎಂ., ಉಪವಿಭಾಗಾಧಿಕಾರಿ ಪಿ.ವಿವೇಕಾನಂದ ಮುಂತಾದ ಅಧಿಕಾರಿಗಳು ಪ್ರಮುಖ ಸ್ಮಾರಕಗಳು, ಸಾರ್ವಜನಿಕ ಶೌಚಾಲಯಗಳು, ರಸ್ತೆ ಬದಿಯ ಸ್ವಚ್ಚತೆಯನ್ನು ಪರಿಶೀಲಿಸಿದರು.

ವಿರೂಪಾಕ್ಷ ದೇವಸ್ಥಾನ ಸಮೀಪದ ವಾಹನ ನಿಲುಗಡೆ ಸ್ಥಳ, ಅಂಗಡಿಗಳ ಸಮೀಪದ ಶುಚಿತ್ವ ಪರಿಶೀಲಿಸಿದ ಡಿ.ಸಿ ಮತ್ತು ಇತರ ಅಧಿಕಾರಿಗಳು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕೆಲವೇ ದಿನಗಳಲ್ಲಿ ಕೇಂದ್ರದ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹಂಪಿಗೆ ಭೇಟಿ ನೀಡಲಿದ್ದು, ಅದರೊಳಗೆ ಎಲ್ಲ ವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ಸೂಚಿಸಿದರು ಎಂದು ಹೇಳಲಾಗಿದೆ.

ಜಿಲ್ಲಾಧಿಕಾರಿ ಅವರು ಹೊಸಪೇಟೆಯಿಂದ ಹಂಪಿಗೆ ತೆರಳುವ ದಾರಿಯಲ್ಲಿ ಮಲಪನಗುಡಿಯಿಂದಲೇ ರಸ್ತೆ ಬದಿಯಲ್ಲಿನ ಕಸ, ಗಲೀಜಿನ ಬಗ್ಗೆ ಗಮನ ಹರಿಸುತ್ತಲೇ ಹೋಗಿದ್ದರು. ಕಡ್ಡಿರಾಂಪುರದ ಹಂಪಿ ದ್ವಾರದ ಬಳಿಯಲ್ಲಿ ಕಾರಿನಿಂದ ಇಳಿದು ಸ್ವಚ್ಛತೆ ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡಿದ್ದರು.

ನಿರ್ಮಲಾ ಸಿಟ್ಟಿಗೆ ಕಾರಣ: ಬಜೆಟ್ ಹಿನ್ನೆಲೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಚಿವಾಲಯದ ಅಧಿಕಾರಿಗಳೊಂದಿಗೆ ಡಿಸೆಂಬರ್ 20 ಮತ್ತು 21ರಂದು ಹಂಪಿ ಸಮೀಪ ಚಿಂತನಾ ಶಿಬಿರ ನಡೆಸಲಿದ್ದಾರೆ ಎಂಬುದು ವಾರಗಳ ಹಿಂದೆಯೇ ಅಧಿಕಾರಿಗಳಿಗೆ ಗೊತ್ತಿತ್ತು. ಸುಮಾರು 120ರಷ್ಟು ಐಎಎಸ್ ಅಧಿಕಾರಿಗಳ ಸಹಿತ 150ಕ್ಕೂ ಅಧಿಕ ಹಿರಿಯ ಅಧಿಕಾರಿಗಳು ಹಂಪಿಯ ಸ್ಮಾರಕಗಳನ್ನು ವೀಕ್ಷಿಸುತ್ತಾರೆ ಎಂದು ತಿಳಿಸಲಾಗಿತ್ತು. ಹಾಗಿದ್ದರೂ ಹಂಪಿಯ ಪ್ರಮುಖ ಸ್ಮಾರಕಗಳ ಬಳಿಯಲ್ಲೇ ಸ್ವಚ್ಛತೆ ಕಾಪಾಡದೇ ಇರುವುದು ನಿರ್ಮಲಾ ಸೀತರಾಮನ್ ಆಕ್ರೋಶಕ್ಕೆ ಕಾರಣವಾಗಿತ್ತು.

ನಿರ್ಮಲಾ ಸೀತಾರಾಮನ್ ಅವರು ಮಲಪನಗುಡಿಯ ವಿಜಯಶ್ರೀ ಹೆರಿಟೇಜ್ ರೆಸಾರ್ಟ್‌ನಲ್ಲಿ ಡಿ.20 ಮತ್ತು 21ರಂದು ಚಿಂತನಾ ಶಿಬಿರ ನಡೆಸುವುದರ ಜತೆಜತೆಗೆ ಅಧಿಕಾರಿಗಳೊಂದಿಗೆ ಹಂಪಿಯ ಸ್ಮಾರಕಗಳನ್ನು ಸಹ ನೋಡಲು ಬಂದಿದ್ದರು. ಆಗ ಅವರಿಗೆ ಹಲವೆಡೆ ಸ್ವಚ್ಛತೆಯ ಕೊರತೆ ಕಾಣಿಸಿತ್ತು.

ನಿರ್ಮಲಾ ಸೀತರಾಮನ್ ಹಂಪಿ ಭೇಟಿಯ ವೇಳೆ ಪಾರಂಪರಿಕ ಪ್ರದೇಶದಲ್ಲಿ ಎಷ್ಟು ಶೌಚಾಲಯಗಳಿವೆ ಎಂದು ಅಧಿಕಾರಿಗಳನ್ನು ಕೇಳಿದ್ದಾರೆ. ಇಂತಹ ಪರಿಸ್ಥಿತಿ ನನಗೆ ಸಹಿಸಲು ಆಗುತ್ತಿಲ್ಲ. ಇನ್ನೂ ಪ್ರತಿದಿನ ಬರುವ ಸಾವಿರಾರು ಪ್ರವಾಸಿಗರು ಮತ್ತು ಪ್ರವಾಸಿಗರ ಪರಿಸ್ಥಿತಿ ಇನ್ನೂ ಹೇಗಿರುತ್ತದೆ ಎಂದು ಕಿಡಿಕಾರಿದ್ದಾರೆ.

ಹಂಪಿ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ, ASI ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಳ್ಳದಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸೀತಾರಾಮನ್ ಅವರ ಭೇಟಿಯು ಭಾರತದ ಪ್ರಮುಖ ಪಾರಂಪರಿಕ ತಾಣಗಳಲ್ಲಿ ಒಂದಾದ ಹಂಪಿಯ ನಿರ್ವಹಣೆ, ನೈರ್ಮಲ್ಯ ಮತ್ತು ಸಂರಕ್ಷಣೆಯ ಬಗ್ಗೆ ಸ್ಥಳೀಯ ನಿವಾಸಿಗಳು ಮತ್ತು ಪಾಲುದಾರರಲ್ಲಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಂಡು ಉತ್ತಮ ಸೌಲಭ್ಯ ಕಲ್ಪಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments