ಕನ್ನಡ ರಾಜ್ಯೋತ್ಸವ ಮೆರವಣಿಗೆ ವೇಳೆ ದುಷ್ಕರ್ಮಿಗಳು 5 ಮಂದಿಗೆ ಚಾಕು ಇರಿದ ಘಟನೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದಿದೆ.
ನವೆಂಬರ್ 1 ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಕೆಲವರು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯೋತ್ಸವದ ರೂಪಕಗಳ ಮೆರವಣಿಗೆ ಗುಂಪಿನಲ್ಲಿ ಏಕಾಏಕಿ ಬಂದ ದುಷ್ಕರ್ಮಿಗಳು ಮನಸೋಇಚ್ಛೆ ಐವರಿಗೆ ಚಾಕು ಇರಿದಿದ್ದಾರೆ.
ಬೆಳಗಾವಿಯ ನೆಹರೂ ನಗರದ ನಿವಾಸಿಗಳಾದ ಗುರುನಾಥ ವಕ್ಕೂಂದ, ಸಚೀನ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್, ವಿನಾಯಕ ಹಾಗೂ ನಜೀರ್ ಪಠಾಣ್ ಚಾಕು ಇರಿತಕ್ಕೊಳಗಾಗಿದ್ದಾರೆ. ಕೂಡಲೇ ಗಾಯಾಳುಗಳನ್ನ ಬೆಳಗಾವಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಗರ ಪೊಲೀಸ್ ಆಯುಕ್ತ ಭೂಷಣ ಭೊರಸೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


