Wednesday, December 24, 2025
Google search engine
Homeರಾಜ್ಯಏಪ್ರಿಲ್ ಅಂತ್ಯದೊಳಗೆ 3000 ಲೈನ್ ಮೆನ್ ಗಳ ನೇಮಕ: ಸಚಿವ ಕೆಜೆ ಜಾರ್ಜ್ ಘೋಷಣೆ

ಏಪ್ರಿಲ್ ಅಂತ್ಯದೊಳಗೆ 3000 ಲೈನ್ ಮೆನ್ ಗಳ ನೇಮಕ: ಸಚಿವ ಕೆಜೆ ಜಾರ್ಜ್ ಘೋಷಣೆ

ರಾಜ್ಯದಲ್ಲಿ ಲೈನ್ ಮೆನ್ ಗಳ ಕೊರತೆ ನೀಗಿಸಲು ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್ ಮೆನ್ ಗಳನ್ನು ನೇಮಕ ಮಾಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಬೀದರ್ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜನಪತಿನಿಧಿಗಳು ಮತ್ತು ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, “ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ಲೈನ್ ಮೆನ್ ಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ 3 ಸಾವಿರ ಲೈನ್ ಮನ್ ಗಳ ನೇಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು”, ಎಂದರು.

ಟ್ರಾನ್ಸ್ ಫಾರ್ಮರ್ ಗಳ ರಿಪೇರಿ, ಅದರಲ್ಲೂ ಮುಖ್ಯವಾಗಿ ರೈತರಿಗೆ ವಿದ್ಯುತ್ ಪೂರೈಸುವ ಟ್ರಾನ್ಸ್ ಫಾರ್ಮರ್ ಗಳ ದುರಸ್ತಿ ಅಥವಾ ಬದಲಾವಣೆಗೆ ತುರ್ತು ಕ್ರಮ ಕೈಗೊಳ್ಳಬೇಕು. ವಿದ್ಯುತ್ ತಂತಿ, ಕಂಬಗಳ ದುರಸ್ತಿ ಸೇರಿದಂತೆ ವಿದ್ಯುತ್ ಪೂರೈಕೆಯಲ್ಲಿ ಆಗುವ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಳೆದ ವರ್ಷ ಬರಗಾಲವಿದ್ದರೂ ಬೇಸಿಗೆಯಲ್ಲಿ ಕೂಡ ಯಾವುದೇ ತೊಂದರೆಯಾಗದಂತೆ ಸಮರ್ಪಕವಾಗಿ ವಿದ್ಯುತ್ ಪೂರೈಸಲಾಗಿದ್ದು, ಈ ಬಾರಿಯೂ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಇಲಾಖೆಯು ಸನ್ನದ್ಧವಾಗಿದೆ. ವಿದ್ಯುತ್ ಸಂಬಂಧಿಸಿದಂತೆ ಕೆಲ ತಾಂತ್ರಿಕ ದೋಷಗಳು ಆಗಾಗ್ಗೆ ಕಂಡುಬರುತ್ತಿರುವುದರಿಂದ ಕೆಲವೊಮ್ಮೆ ಸಮಸ್ಯೆಗಳ ನಿವಾರಣೆಗೆ ಸಮಯ ಬೇಕಾಗುತ್ತದೆ. ಆದರೆ, ಈ ಎಲ್ಲಾ ಕಾರ್ಯವನ್ನು ಕಾಲಮಿತಿಯಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

“ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿಯಾಗಿ ಅವರ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು. ವಿದ್ಯುತ್ ಪೂರೈಕೆಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಜಪ್ರತಿನಿಧಿಗಳ ಗಮನಕ್ಕೆ ತಂದು ಅವರ ಮೂಲಕ ಬಗೆಹರಿಸಿಕೊಳ್ಳಬೇಕು”, ಎಂದು ಸೂಚಿಸಿದರು.

“ರಾಜ್ಯದಲ್ಲಿ ಸದ್ಯ ದಿನಕ್ಕೆ 16 ರಿಂದ 17 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯಿದೆ. ಈ ವರ್ಷ ಯಾವುದೇ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ. ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾದರೆ ವಿದ್ಯುತ್ ಖರೀದಿಗೂ ಸಿದ್ಧವಾಗಿದ್ದೇವೆ”, ಎಂದು ಹೇಳಿದರು.

ರಾಜ್ಯದಲ್ಲಿ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಕುರಿತು ಈ ಹಿಂದೆ ಸಲ್ಲಿಸಿದ್ದ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಲಾಗುವುದು.ಅದಾದ ಬಳಿಕ ಹೊಸದಾಗಿ ಅಕ್ರಮ-ಸಕ್ರಮಕ್ಕೆ ಸಲ್ಲಿಸಿದ್ದ ಅರ್ಜಿಗಳ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಬೀದರ್ ಜಿಲ್ಲೆಯಲ್ಲಿ ಒಟ್ಟು 1,480 ಹೊಸ ಅರ್ಜಿಗಳು ಅಕ್ರಮ-ಸಕ್ರಮ ಯೋಜನೆಯಲ್ಲಿ ಸಲ್ಲಿಕೆಯಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುುದು ಎಂದರು.

ಮೂರು ದಿನದಲ್ಲಿ ಪರಿಹಾರ ತಲುಪಿಸಿ:

ಬೀದರ್ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ.ಖಂಡ್ರೆ ಮಾತನಾಡಿ, ಜಿಲ್ಲೆಯಲ್ಲಿ ವಿದ್ಯುತ್ ಅವಘಡದಲ್ಲಿ ಮರಣ ಹೊಂದಿದ 9 ಜನರ ಕುಟುಂಬಕ್ಕೆ ಈವರೆಗೂ ಪರಿಹಾರ ನೀಡಿದ ಬಗ್ಗೆ ಇಂಧನ ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ.ಜಾರ್ಜ್, ಮಂದಿನ 3 ದಿನದೊಳಗಾಗಿ ಪರಿಹಾರ ತಲುಪಿಸುವಂತೆ ಕೆ.ಜೆ.ಜಾರ್ಜ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ 13 ಉಪ ಕೇಂದ್ರಗಳ ಸ್ಥಾಪನೆಗೆ ಜಾಗದ ಸಮಸ್ಯೆಗಳಿದ್ದಲ್ಲಿ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಅಪಾಯಕಾರಿ ವಿದ್ಯುತ್ ತಂತಿ ಹಾಗೂ ಕಂಬಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಹಲವಾರು ತಿಂಗಳ ಹಿಂದೆ ಹೇಳಲಾಗಿದೆ. ಅಧಿಕಾರಿಗಳು ನಿರ್ಲಕ್ಷ ತೋರದೆ ಒಟ್ಟು ಅಪಾಯಕಾರಿ ಸ್ಥಿತಿಗತಿ ವರದಿ ನೀಡುವಂತೆ ಹಾಗೂ ತುರ್ತು ಅಗತ್ಯವಿದ್ದಲ್ಲಿ ತಕ್ಷಣವೇ ಕಂಬ/ತಂತಿ ಸರಿಪಡಿಸುವಂತೆ ಸೂಚಿಸಿದರು.

ಗಡಿ ಭಾಗದಲ್ಲಿ ಹಾಗೂ ಇತರೆಡೆ ಅನಧಿಕೃತ ಬಡಾವಣೆಗಳು ನಿರ್ಮಾಣಗೊಂಡಿವೆ. ಅವರಿಗೂ ಸಹ ವಿದ್ಯುತ್ ಸಂಪರ್ಕ ನೀಡುವಂತೆ ಸಚಿವರಿಬ್ಬರೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಂಸದ ಸಾಗರ್ ಈಶ್ವರ ಖಂಡ್ರೆ ಮಾತನಾಡಿ, ಟ್ರಾನ್ಸ್ ಫಾರ್ಮರ್ ಗಳ ಬದಲಾಣೆಗೆ ಹಾಗೂ ವಾಹನ ಸಾಗಾಟಕ್ಕೆ ಅಧಿಕಾರಿಗಳು ತೀರಾ ವಿಳಂಬ ಮಾಡುತ್ತಿರುವ ಬಗ್ಗೆ ಭಾಲ್ಕಿ ಭಾಗದ ಗ್ರಾಮಗಳ ಜನರಿಂದ ದೂರುಗಳು ಬರುತ್ತಿದ್ದು, ಇದಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದಾಗ, ಯಾವುದೇ ವಿಳಂಬವಿಲ್ಲದೆ ಕೆಲಸ ಮಾಡುವತೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಬಸವಕಲ್ಯಾಣ ಕ್ಷೇತ್ರದ ಶಾಸಕ ಶರಣು ಸಲಗರ, ಹುಮನಾಬಾದ್ ಕ್ಷೇತ್ರದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯಚಂದ್ರಶೇಖರ ಪಾಟೀಲ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾಲಾ ನಾರಾಯಣರಾವ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಜೇಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಿಂಗಣ್ಣನವರ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ ಬದೋಲೆ, ಕೆಪಿಟಿಸಿಎಲ್ ಮುಖ್ಯ ಅಭಿಯಂತರ ಪ್ರಕಾಶ ಬಿ., ಜೇಸ್ಕಾಂ ಮುಖ್ಯ ಅಭಿಯಂತರ ವೆಂಕಟೇಶ ಅಳ್ಳೆ, ಜೇಸ್ಕಾಂ ಅಧೀಕ್ಷಕ ಅಭಿಯಂತರ ವೀರಭದ್ರ, ಕೆಪಿಟಿಸಿಎಲ್ ನ ಚಂದ್ರಕಾಂತ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments