ಕಣ್ಣಿಗೆ ಖಾರದಪುಡಿ ಎರಚುವುದು, ಕಾಲಿನಿಂದ ಕಾಲು ತುಳಿಯುವುದು, ಬೆಲ್ಟ್ ನಿಂದ ಮನಬಂದಂತೆ ಥಳಿಸುವುದು, ಬುದ್ದಿಮಾಂದ್ಯ ಮಕ್ಕಳ ಕೈಯಲ್ಲೇ ಮನೆ ಕೆಲಸ ಮಾಡಿಸುವುದು. ಇದು ಬಾಗಲಕೋಟೆಯ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶಿಕ್ಷಕ ದಂಪತಿಯ ವಿಕೃತ ದೌರ್ಜನ್ಯದ ವೀಡಿಯೋ ತುಣುಕುಗಳಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬಾಗಲಕೋಟೆ ನವನಗರದ 54ನೇ ಸೆಕ್ಟರ್ನಲ್ಲಿರುವ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯಲ್ಲಿ ನಡೆದಿರುವ ಈ ದೌರ್ಜನ್ಯ ಬೆಳಕಿಗೆ ಬರುತ್ತಿದ್ದಂತೆ ಮಾನವ ಹಕ್ಕುಗಳು ಹಾಗೂ ಮಕ್ಕಳ ಹಕ್ಕು ರಕ್ಷಣಾ ಆಯೋಗ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ವಿಚಾರಣೆ ನಡೆಸಿದ್ದಾರೆ.
ದೀಪಕ್ ರಾಠೋಡ್(16) ಎಂಬ ಬುದ್ಧಿಮಾಂದ್ಯ ಬಾಲಕನ ಮೇಲೆ ಮಹಾರಾಷ್ಟ್ರ ಮೂಲದ ಶಿಕ್ಷಕ ಅಕ್ಷಯ್ ಇಂಗಳಕರ್ ಹಾಗೂ ಪತ್ನಿ ಮಾಲಿನಿ ದೌರ್ಜನ್ಯ ನಡೆಸಿದ್ದರು, ಅಕ್ಷಯ್ ಬೆಲ್ಟ್, ಪ್ಲಾಸ್ಟಿಕ್ ಪೈಪ್ನಿಂದ ಹಲ್ಲೆ ಮಾಡಿದರೆ, ಅವರ ಪತ್ನಿ ಮಾಲಿನಿ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯವೆಸಗಿದ್ದಾರೆ.
ಹಲ್ಲೆಯನ್ನ ಪ್ರಶ್ನಿಸಲು ಬಂದ ಪೋಷಕರಿಗೆ ಶಿಕ್ಷಕ ದಂಪತಿ ಬೆದರಿಕೆ ಹಾಕಿದ್ದಾರೆ. ಸದ್ಯ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಶಿಕ್ಷಕ ಅಕ್ಷಯ್ ಮತ್ತು ಅವರ ಪತ್ನಿ ಮಾಲಿನಿಯಿಂದ ಮಾತ್ರವಲ್ಲದೆ ಸಹ ಶಿಕ್ಷಕ ವಿಶಾಲ್ ಪಾಟೀಲ್ನಿಂದಲೂ ಬಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಬುದ್ಧಿಮಾಂದ್ಯ ಶಾಲೆಯ ಮುಂದೆ ಪೋಷಕರು ಜಮಾಯಿಸಿದ್ದಾರೆ. ಈ ನೀಚ ಶಿಕ್ಷಕ ದಂಪತಿ ಕೃತ್ಯಕ್ಕೆ ಮಕ್ಕಳ ಪೋಷಕರು ಕಣ್ಣೀರು ಹಾಕಿದ್ದು, ಇವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಶಿಕ್ಷಕ ದಂಪತಿಯನ್ನ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಬಾಲಕನ ತಾಯಿ ಕಣ್ಣೀರು
ದೀಪಕ್ ರಾಠೋಡ್ ತಾಯಿ ಪಾರ್ವತಿ ಕಣ್ಣೀರಿಟ್ಟಿದ್ದು, ನಾನು ಪ್ರತಿ ತಿಂಗಳು ಆರು ಸಾವಿರ ರೂ ಹಣ ಕೊಡುತ್ತೇವೆ. ನಮ್ಮ ಮಕ್ಕಳಿಗೆ ಬಾತ್ ರೂಮ್, ಶೌಚಾಲಯ ತೊಳೆಯುವುದಕ್ಕೆ ಹಚ್ಚುತ್ತಾರೆ. ಒಪ್ಪದಿದ್ದಾಗ ಕಣ್ಣಲ್ಲಿ ಖಾರದ ಪುಡಿ ಹಾಕುವುದು, ಬೆಲ್ಟ್ ಹಾಗೂ ಪ್ಲಾಸ್ಟಿಕ್ ಪೈಪ್ನಿಂದ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಕಠಿಣ ಕ್ರಮ ಆಗಬೇಕು. ಇದನ್ನು ಕೇಳಲು ಬಂದರೆ ಏನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ ಅಂತಾರೆ. ನಮ್ಮ ಮಗ ಅಷ್ಟೇ ಅಲ್ಲ ಬೇರೆ ಮಕ್ಕಳಿಗೂ ಹಲ್ಲೆ ಮಾಡಿದ್ದಾರೆ. ಈ ಶಾಲೆಯ ಲೈಸೆನ್ಸ್ ರದ್ದು ಮಾಡಿ ಬಂದ್ ಮಾಡಬೇಕು ಎಂದು ಬಾಲಕನ ತಾಯಿ ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ಶಿಕ್ಷಕ ಮತ್ತು ಪತ್ನಿ ವಾದ
ಹಲ್ಲೆ ಸಂಬಂಧ ಬಾಗಲಕೋಟೆಯ ನವನಗರ ಠಾಣೆ ಪೊಲೀಸರಿಂದ ಶಿಕ್ಷಕ ಅಕ್ಷಯ್, ಪತ್ನಿ ಮಾಲಿನಿ ವಿಚಾರಣೆ ಮಾಡಿದ್ದು, ನಾವು ಹಲ್ಲೆ ಮಾಡಿಲ್ಲ ಎಂದು ವಾದ ಮಾಡಿದ್ದಾರೆ. ನಾವು ಖಾರದಪುಡಿ ಎರಚಿಲ್ಲ ಹುಡುಗರೇ ಎರಚಿಕೊಂಡಿದ್ದಾರೆ. ಬೇಕಿದ್ದರೆ ಬೇರೆ ಹುಡುಗರನ್ನ ಕೇಳಿ ಎಂದು ಶಿಕ್ಷಕ ದಂಪತಿ ಸಮರ್ಥನೆ ನೀಡಿದ್ದಾರೆ.


