ತಾಳಿ ಕಟ್ಟುಲು ವರ ಮುಂದಾಗುತ್ತಿದ್ದಂತೆ ವಧು ಮದುವೆ ಆಗಲ್ಲ ಎಂದು ಹಠ ಹಿಡಿದು ಕುಳಿತ ಕಾರಣ ಕೊನೆಯ ಕ್ಷಣದಲ್ಲಿ ಮದುವೆ ರದ್ದಾದ ವಿಲಕ್ಷಣ ಘಟನೆ ಹಾಸನದಲ್ಲಿ ನಡೆದಿದೆ.
ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಈ ಘಟನೆ ಭಾರೀ ಸುದ್ದಿ ಮಾಡುತ್ತಿದೆ.
ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲೂಕಿನ ವೇಣುಗೋಪಾಲ ಜಿ ಮದುವೆ ನಿಶ್ಚಯವಾಗಿತ್ತು. ತಾಳಿ ಕಟ್ಟುವ ಕೆಲವೇ ಕ್ಷಣಗಳ ಮೊದಲು ಕರೆಯನ್ನು ಸ್ವೀಕರಿಸಿ ಮಾತನಾಡಿದ ವಧು ತಾಳಿ ಕಟ್ಟಲು ವರ ಬರುತ್ತಿದ್ದಂತೆ ಮದುವೆ ಬೇಡ ಎಂದು ಹೇಳಿದ್ದಾಳೆ.
ವರ ಹಾಗೂ ಆತನ ಕುಟುಂಬದವರು ಮದುವೆ ಯಾಕೆ ಬೇಡ ಎಂದು ಕಾರಣ ಕೇಳಿದಾಗ ನನಗೆ ಮದುವೆ ಇಷ್ಟವಿಲ್ಲ. ಅಪ್ಪ-ಅಮ್ಮನನ್ನು ಬಿಟ್ಟಿರಲು ಆಗಲ್ಲ ಎಂದೆಲ್ಲಾ ಕತೆ ಹೇಳಿದ್ದಾಳೆ. ಆದರೆ ನಂತರ ಫೋನ್ ಯಾರು ಮಾಡಿದ್ದು? ಏನು ಮಾತನಾಡಿದೆ ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದಾಗ ನಿಜ ವಿಷಯ ಬಾಯಿ ಬಿಟ್ಟಿದ್ದಾಳೆ.
ಪೋಷಕರು, ಕುಟುಂಬಸ್ಥರು ವಧುವನ್ನು ಮನ ಒಲಿಸುವ ಪ್ರಯತ್ನ ಮಾಡಿದ್ದಾರೆ. ಆಕೆ ತಾನು ಬೇರೊಬ್ಬ ಹುಡುಗನ ಪ್ರೀತಿಸುತ್ತಿರುವುದಾಗಿ ಹೇಳಿದ್ದಾಳೆ. ಪೋಷಕರು, ಆಪ್ತರು ತಾಳಿ ಕಟ್ಟಲು ಸೂಚಿಸಿದರೂ ವರ ತಾಳಿ ಕಟ್ಟಲಿಲ್ಲ. ವಧು ಮದುವೆ ಮಂಟಪದಿಂದ ಹೊರ ನಡೆದಿದ್ದಾಳೆ.
ಈಶ್ವರಹಳ್ಳಿ ಕೂಡಿಗೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕನಾಗಿರುವ ವೇಣುಗೋಪಾಲ.ಜಿ ಬಹಳಷ್ಟು ಖರ್ಚು ಮಾಡಿ ಅದ್ಧೂರಿ ಮದುವಗೆ ವ್ಯವಸ್ಥೆ ಮಾಡಿದ್ದ. ಆದರೆ ಕೊನೆಗೆ ಮದುವೆ ಆಗಲಿಲ್ಲ.
ಕೊನೆಯ ಕ್ಷಣದಲ್ಲಿ ಮದುವೆ ಬೇಡ ಎಂದ ಮಗಳನ್ನು ಪೋಷಕರು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಆಕೆ ನಿರ್ಧಾರ ಬದಲಿಸಿಲ್ಲ. ಮಗಳ ನಿರ್ಧಾರದಿಂದ ಆಘಾತಗೊಂಡ ಪೋಷಕರು ಕಣ್ಣೀರಿಟ್ಟಿದ್ದಾರೆ. ಮದುವೆ ಬೇಡ ಎಂದು ಹಸಮಣೆಯಿಂದ ಎದ್ದ ವಧು ಕಾರಿನ ಮೂಲಕ ಮದುವೆ ಮಂಟಪದಿಂದ ತೆರಳಿದ್ದಾಳೆ. ಎರಡೂ ಕುಟುಂಬದ ನಡುವೆ ಗಲಾಟೆ ನಡೆದಿದೆ. ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.


