ಬೆಂಗಳೂರು: ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಗೆ ತೊಗರಿ ಬೆಳೆ ಖರೀದಿಸಲು ಸೂಚನೆ ನೀಡಿದೆ. ಈ ಮೂಲಕ ಅಕಾಲಿಕ ಮಳೆ ಹೊಡೆತದಿಂದ ತತ್ತರಿಸಿದ್ದ ಕರ್ನಾಟಕದ ರೈತರಿಗೆ ಗುಡ್‌ನ್ಯೂಸ್ ಕೊಟ್ಟಿದೆ.
ಕರ್ನಾಟಕದಲ್ಲಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಬೇಳೆ (Toor Dal) ಖರೀದಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ(MSP) ಯಲ್ಲಿ ನಫೆಡ್ (NAFED) ಮತ್ತು ಎನ್‌ಸಿಸಿಎಫ್ (NCCF) ಮೂಲಕ ಆದ್ಯತೆ ಮೇಲೆ ತೊಗರಿ ಖರೀದಿಗೆ ತ್ವರಿತ ಅನುಮೋದನೆ ನೀಡಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ರೈತರ ಹಿತರಕ್ಷಣೆಗೆ ಸದಾ ಬದ್ಧವಾಗಿರುವ ಕೇಂದ್ರ ಸರ್ಕಾರ, ತಮ್ಮ ವಿಶೇಷ ಮನವಿಗೆ ತಕ್ಷಣ ಸ್ಪಂದಿಸಿದೆ. 90 ದಿನದೊಳಗೆ ಖರೀದಿಸಲು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವಾಣ್ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದ್ದ ಕಾಂಗ್ರೆಸ್ ಸಂಸದರ ನಿಯೋಗ ತೊಗರಿ ಬೇಳೆ ಹಾಗೂ ಮೆಕ್ಕೆಜೋಳವನ್ನು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಬೇಕು ಎಂದು ಮನವಿ ಮಾಡಿತ್ತು.
ಕಾಂಗ್ರೆಸ್ ಸಂಸದರ ನಿಯೋಗಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿದ ಸಚಿವರು ಕರ್ನಾಟಕದಲ್ಲಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿಬೇಳೆ ಖರೀದಿಗೆ ಸೂಚನೆ ನೀಡಿದ್ದಾರೆ.


