Home ರಾಜ್ಯ ಆತ್ಮಸಾಕ್ಷಿಗೆ ತಕ್ಕಂತೆ ಪ್ರಾಮಾಣಿಕವಾಗಿ ನಡೆದುಕೊಳ್ಳೋಣ: ಅಧಿಕಾರಿಗಳಿಗೆ ಸಿಎಂ ಸಲಹೆ

ಆತ್ಮಸಾಕ್ಷಿಗೆ ತಕ್ಕಂತೆ ಪ್ರಾಮಾಣಿಕವಾಗಿ ನಡೆದುಕೊಳ್ಳೋಣ: ಅಧಿಕಾರಿಗಳಿಗೆ ಸಿಎಂ ಸಲಹೆ

ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡರೆ ಸಾಕು. ಭ್ರಷ್ಟಾಚಾರ ವ್ಯವಸ್ಥೆ ಕಡಿಮೆ ಆಗುವ ಬದಲಿಗೆ ಹೆಚ್ಚಾಗುತ್ತಿರುವುದು ದುರಂತ. ಆದ್ದರಿಂದ ನಾವೆಲ್ಲರೂ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಪ್ರಾಮಾಣಿಕವಾಗಿ ನಡೆದುಕೊಳ್ಳೋಣ ಎಂದು ಕರೆ ನೀಡಿದರು.

by Editor
0 comments
cm siddaramiah

ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ, ಪ್ರಾದೇಶಿಕ ಅಸಮತೋಲನ, ಅಸಮಾನತೆ ತೊಡೆಯಲು ನಿಮ್ಮ ಸಹಕಾರ ಹೆಚ್ಚು ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಐಎಎಸ್- ಐಪಿಎಸ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಹೊಸವರ್ಷದ ಶುಭಾಶಯಗಳನ್ನು ಕೋರಿ ಮಾತನಾಡಿದ ಅವರು, ಬದುಕಿನಲ್ಲಿ ಏಳು ಬೀಳು ಸಹಜ ಮತ್ತು ನಿರಂತರ. ಪರಿಸ್ಥಿತಿಗಳು ಸದಾ ನಮ್ಮ ಪರವಾಗಿ ಇರುವುದಿಲ್ಲ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಸಮಸ್ಯೆಗಳನ್ನು, ಸಂದರ್ಭಗಳನ್ನು ನಿರ್ವಹಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.

ಆಡಳಿತಾಂಗದಲ್ಲಿ IAS-IPS-IRS-IFS ಅಧಿಕಾರಿಗಳ ಜವಾಬ್ದಾರಿ ಹೆಚ್ಚು. ನಾವು ಕಾನೂನುಗಳನ್ನು ರಚಿಸಿ, ಜಾರಿ ಆಗುವ ದಿಕ್ಕಿನಲ್ಲಿ ನಿರಂತರ ನಿಗಾ ವಹಿಸುತ್ತೇವೆ. ಅಧಿಕಾರಿ ವರ್ಗ ಸಮಾಜಕ್ಕೆ ಪೂರಕವಾಗಿ ಕ್ರಿಯಾಶೀಲತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಸಂವಿಧಾನ ಜಾರಿ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆಡಿದ ಮಾತುಗಳನ್ನು ಉಲ್ಲೇಖಿಸಿದ ಸಿಎಂ, ಸಮಾಜದ ಎಲ್ಲಾ ವರ್ಗಗಳಿಗೆ ಸಾಮಾಜಿಕ-ಆರ್ಥಿಕ ಸ್ವಾತಂತ್ರ್ಯ ಒದಗಿಸಬೇಕು. ಇಲ್ಲದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುವುದಿಲ್ಲ ಎಂದರು.

ಭಾರತದ ಆರ್ಥಿಕತೆ ಕುಸಿತ ಕಂಡಿದ್ದಾಗ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮನಮೋಹನ್ ಸಿಂಗ್ ಅವರು ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಿದರು. ದೇಶದ ಆರ್ಥಿಕ ಬೆಳವಣಿಗೆ ಆಗಿ ಇದರ ಲಾಭ ದೇಶದ ಜನರಿಗೆ ಲಭಿಸುವಂತೆ ಮಾಡಿದರು. ಸಂವಿಧಾನದ ನಿರ್ದೇಶಕ ತತ್ವಗಳಾದ ಸಮಾನತೆ, ಜಾತ್ಯತೀತತೆ, ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ದೇಶದ ಜನರ ಮೂಲಭೂತ ಹಕ್ಕುಗಳನ್ನಾಗಿ ಮಾಡಿದರು. ಮಾಹಿತಿ ಹಕ್ಕು, ಆಹಾರದ ಹಕ್ಕು, ಶಿಕ್ಷಣದ ಹಕ್ಕುಗಳನ್ನು ಕಡ್ಡಾಯ ಮಾಡಿದರು. ಆ ಮೂಲಕ ಸಮಾನತೆಯೆಡೆಗೆ ದೇಶವನ್ನು ಮುನ್ನಡೆಸಿದರು ಎಂದು ವಿವರಿಸಿದರು.

banner

ಸಮಾನ ಅವಕಾಶಗಳು ಸಿಕ್ಕಾಗ ಸಮಾನತೆ ದಿಕ್ಕಿಗೆ ನಾವು ಸಾಗಬಹುದು ಎನ್ನುವ ಕಾರಣದಿಂದಲೇ ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಜನರ ಕೈಯಲ್ಲಿ ಕಾಸು ಇರಬೇಕು, ಜನರ ಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಇದಕ್ಕೆ ತಕ್ಕಂತೆ ರಾಜ್ಯದ ಜನರ ಜೇಬಲ್ಲಿ ಹಣ ಇರುವ ಗ್ಯಾರಂಟಿಗಳನ್ನು ನಾವು ಜಾರಿ ಮಾಡಿದೆವು. ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರ ಜನರಿಗೆ ಹಣ ತಲುಪಿಸುತ್ತಿದ್ದೇವೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ಇಲ್ಲಿಯವರೆಗೂ 35 ಸಾವಿರ ಕೋಟಿ ರೂಪಾಯಿಗಳನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಖರ್ಚು ಮಾಡಿದ್ದೇವೆ. ಈಗಲಾದರೂ ನಂಜುಂಡಪ್ಪ ಅವರ ವರದಿಯಲ್ಲಿನ ಪ್ರಾದೇಶಿಕ ಅಸಮಾನತೆ ಕಡಿಮೆಯಾಗಿದೆಯಾ ಎನ್ನುವುದನ್ನು ಅಧ್ಯಯನ ನಡೆಸಿ ವರದಿ ನೀಡಿಲು ಗೋವಿಂದರಾವ್ ಅವರ ಸಮಿತಿ ರಚಿಸಲಾಗಿದೆ. ಏಕೆ ಉತ್ತರ ಕರ್ನಾಟಕದ ಅಸಮಾನತೆ ಕಡಿಮೆ ಆಗಿಲ್ಲ ಎನ್ನುವ ಬಗ್ಗೆಯೂ ಬೆಳಗಾವಿ ಅಧಿವೇಶನದಲ್ಲೂ ಚರ್ಚಿಸಿದ್ದೇವೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ನೀವೂ ಅಷ್ಟೆ ಗಂಭೀರವಾಗಿ ಪರಿಗಣಿಸಿ ಪ್ರಾದೇಶಿಕ ಅಸಮತೋಲನ ತೊಡೆದು ಹಾಕಲು ಶ್ರಮಿಸಬೇಕು ಎಂದರು.

ಯುವ ಜನತೆ ನಮ್ಮ ಆಸ್ತಿ: ಇವರ ಭವಿಷ್ಯ ಹಾಳಾಗದಂತೆ ಎಚ್ಚರ ವಹಿಸುವ ಸವಾಲು IPS ಅಧಿಕಾರಿಗಳು ಸ್ವೀಕರಿಸಬೇಕು
ಯುವ ಜನತೆ ನಮ್ಮ ಸಮಾಜದ ಆಸ್ತಿ. ಇವರ ಭವಿಷ್ಯ ಹಾಳಾಗದಂತೆ ಎಚ್ಚರ ವಹಿಸುವ ಸವಾಲನ್ನು IPS ಅಧಿಕಾರಿಗಳು ಸ್ವೀಕರಿಸಬೇಕು. ಡ್ರಗ್ಸ್ ಹಾವಳಿ, ಅಪರಾಧಿಕ ಜಗತ್ತಿನ ಕಡೆಗೆ ಯುವ ಜನತೆ ಆಕರ್ಷಿತರಾಗದಂತೆ ಎಚ್ಚರ ವಹಿಸಿ. ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರಗತಿ ಆಗುತ್ತಿದೆ. ಈ ಪ್ರಗತಿ ಅಪರಾಧಗಳಿಗೆ ಬಳಕೆ ಆಗದೆ ಯುವ ಜನರ ಭವಿಷ್ಯ ರೂಪಿಸಲು ಸಹಕಾರಿ ಆಗುವಂತೆ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ನೀವು ಅಧಿಕಾರಿ ವರ್ಗ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ರಾಜ್ಯದಲ್ಲಿ ಅದ್ಭುತ ಬದಲಾವಣೆ, ಸುಧಾರಣೆಗಳನ್ನು ತರಲು ಸಾಧ್ಯವಿದೆ. ಇದಕ್ಕಾಗಿ ನಿಮ್ಮ ಕಾರ್ಯಕ್ಷಮತೆ ಬಳಕೆಯಾಗಲಿ. ಅಧಿಕಾರಿ ವರ್ಗಕ್ಕೆ ನಮ್ಮ ಸಲಹೆಯ ಅಗತ್ಯ ಇಲ್ಲ. ನೀವು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡರೆ ಸಾಕು. ಭ್ರಷ್ಟಾಚಾರ ವ್ಯವಸ್ಥೆ ಕಡಿಮೆ ಆಗುವ ಬದಲಿಗೆ ಹೆಚ್ಚಾಗುತ್ತಿರುವುದು ದುರಂತ. ಆದ್ದರಿಂದ ನಾವೆಲ್ಲರೂ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಪ್ರಾಮಾಣಿಕವಾಗಿ ನಡೆದುಕೊಳ್ಳೋಣ ಎಂದು ಕರೆ ನೀಡಿದರು.
ನಮ್ಮ-ನಿಮ್ಮ ಉದ್ದೇಶ ಒಂದೇ. ಸಮಾಜದ ಪ್ರಗತಿ ಮತ್ತು ಆರೋಗ್ಯಕರ ಬದಲಾವಣೆ. ಇದಕ್ಕಾಗಿ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳೋಣ ಎಂದು ಕರೆ ನೀಡಿದರು.

ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಸುಳ್ಳನ್ನು ಪದೇ ಪದೇ ಹರಡಿಸುತ್ತಿದ್ದಾರೆ. ಇದು ಸುಳ್ಳು ಎನ್ನುವುದು ನಿಮಗೇ ಗೊತ್ತಿದೆ. ಹಿಂದಿನ ಸರ್ಕಾರ ಬಜೆಟ್ ಒಪ್ಪಿಗೆ ಪಡೆಯದೆ ಯದ್ವಾ ತದ್ವಾ ಟೆಂಡರ್ ಕರೆದು ಹಾನಿ ಮಾಡಿತ್ತು. ಸುಮಾರು 39 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿ ಹೋಗಿದ್ದರು. ಜೊತೆಗೆ ಕೇಂದ್ರ ಸರ್ಕಾರದಿಂದ ನಮಗೆ ಅನ್ಯಾಯ ಮುಂದುವರೆದಿದೆ. ಇದೆಲ್ಲವನ್ನೂ ಸರಿದೂಗಿಸಿಕೊಂಡು ಅಭಿವೃದ್ಧಿಗೂ ಹಣ ಒದಗಿಸುತ್ತಿದ್ದೇವೆ. ಆದ್ದರಿಂದ ಇಲಾಖೆಗಳಲ್ಲಿರುವ ಹಣ ಹೆಚ್ಚು ಸೋರಿಕೆ ಆಗದಂತೆ ತಡೆಯುವ ಜವಾಬ್ದಾರಿ ಮತ್ತು ಕರ್ತವ್ಯ ನಿಮ್ಮ ಮೇಲಿದೆ ಎಂದರು.

ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅತೀಕ್ ಅಹಮದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿ ಎಲ್ಲಾ ಹಿರಿಯ ಅಧಿಕಾರಿಗಳು, ಸಚಿವ ಜಮೀರ್ ಅಹಮದ್, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಉಪಸ್ಥಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
700 ಮಹಿಳೆಯರಿಗೆ ವಂಚಿಸಿದ 23 ವರ್ಷದ ಯುವಕ! ಕಾಶ್ಮೀರಕ್ಕೆ ಕಶ್ಯಪ ಋಷಿ ಹೆಸರು ಮರುನಾಮಕರಣ: ಸುಳಿವು ನೀಡಿದ ಅಮಿತ್ ಶಾ? ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ! ಭಾರತದಲ್ಲೂ ಚೀನಾದ ಎಚ್ ಎಂವಿಪಿ ವೈರಸ್ ಭೀತಿ: ರೋಗ ಲಕ್ಷಣಗಳೇನು? ಗಾಢ ಮಂಜು: ಉತ್ತರ ಭಾರತದಲ್ಲಿ 200ಕ್ಕೂ ವಿಮಾನಗಳ ಸಂಚಾರ ವ್ಯತ್ಯಾಯ ದೂರು ನೀಡಲು ಬಂದ ಮಹಿಳೆ ಜೊತೆ ರಾಸಲೀಲೆ: ಮಧುಗಿರಿ ಡಿವೈಎಸ್ ಪಿ ರಾಮಚಂದ್ರಪ್ಪ ಅರೆಸ್ಟ್ ಬೀದಿ ಬದಿ ವ್ಯಾಪಾರದ ರಸ್ತೆಗಳನ್ನು ಗುರುತಿಸಲು ಬಿಬಿಎಂಪಿ ಆಯುಕ್ತ ತುಷಾರ್ ಗಿರಿ ನಾಥ್ ಸೂಚನೆ 2700 ಕೋಟಿಯ ಮನೆ, 8400 ಕೋಟಿಯ ವಿಮಾನದಲ್ಲಿ ಹಾರಾಡುವ ಪ್ರಧಾನಿ: ಕೇಜ್ರಿವಾಲ್ ಟೀಕೆ ನಟ ಅಲ್ಲು ಅರ್ಜುನ್ ಗೆ ಬಿಗ್ ರಿಲೀಫ್: ಕಾಲ್ತುಳಿತ ಪ್ರಕರಣದಲ್ಲಿ ಜಾಮೀನು ಮಂಜೂರು ಐಶ್ವರ್ಯ ಗೌಡ ಪ್ರಕರಣದಲ್ಲಿ ನಿಖಿಲ್, ಅನಿತಾ ಕುಮಾರಸ್ವಾಮಿ ಹೆಸರು: ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದೇನು?