ಲಾರಿ ಡಿಕ್ಕಿ ಹೊಡೆದ ಪರಿಣಾಮ ಪ್ರಿ ವೆಡ್ಡಿಂಗ್ ಶೂಟಿಂಗ್ ಮುಗಿಸಿ ಬೈಕ್‌ನಲ್ಲಿ ಮರಳುತ್ತಿದ್ದ ಜೋಡಿ ಮೃತಪಟ್ಟ ದಾರುಣ ಘಟನೆ ಕೊಪ್ಪಳದಲ್ಲಿ ಸಂಭವಿಸಿದೆ.
ಗಂಗಾವತಿ ತಾಲ್ಲೂಕಿನ ದಾಸನಾಳ ಸಮೀಪದ ಬಂಡ್ರಾಳ್-ವೆಂಕಟಗಿರಿ ಕ್ರಾಸ್ ಬಳಿ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಇರಕಲ್‌ಗಡಾದ ನಿವಾಸಿ ಕರಿಯಪ್ಪ ಮಡಿವಾಳ್ ಹನುಮನಹಟ್ಟಿ (26) ಹಾಗೂ ಕವಿತಾ ಪಾವಾಡೆಪ್ಪ ಮಡಿವಾಳ (19) ಮೃತಪಟ್ಟ ದುರ್ದೈವಿಗಳು.
ಕಾರಟಗಿ ತಾಲ್ಲೂಕಿನ ಮುಸ್ಟೂರು ಗ್ರಾಮದವರಾದ ಕವಿತಾ ಮತ್ತು ಇರಕಲ್‌ಗಡಾದ ಕರಿಯಪ್ಪ ಮಡಿವಾಳ ಅವರ ನಿಶ್ಚಿತಾರ್ಥ ಐದು ತಿಂಗಳ ಹಿಂದೆ ನಡೆದಿತ್ತು. ಡಿಸೆಂಬರ್ 21ರಂದು ಮದುವೆ ನಿಗದಿಯಾಗಿತ್ತು. ಇನ್ನೆರಡು ವಾರದಲ್ಲಿ ಮದುವೆಯಾಗಬೇಕಿದ್ದ ಜೋಡಿ, ಪ್ರಿ ವೆಡ್ಡಿಂಗ್ ಶೂಟಿಂಗ್‌ಗಾಗಿ ಭಾನುವಾರ ಬೆಳಗ್ಗೆ ಮನೆಯಿಂದ ಹೊರಟಿದ್ದರು.
ಹೊಸಪೇಟೆಯ ಪಂಪಾವನ, ಮುನಿರಾಬಾದಿನ ಜಲಾಶಯ ಸೇರಿದಂತೆ ವಿವಿಧೆಡೆ ಸುತ್ತಾಡಿದ್ದರು. ಸಂಜೆಯಾಗುತ್ತಿದ್ದಂತೆ ಕವಿತಾ ಅವರನ್ನು ಮನೆಗೆ ಬಿಟ್ಟು ಬರಲು ಕರಿಯಪ್ಪ ತನ್ನ ದ್ವಿಚಕ್ರ ವಾಹನದಲ್ಲಿ ಗಂಗಾವತಿಗೆ ಹೋಗುತ್ತಿದ್ದರು.
ಈ ವೇಳೆ, ವೆಂಕಟಗಿರಿಯ ಕಲ್ಲಿನ ಕ್ವಾರಿಯಿಂದ ವೇಗವಾಗಿ ಬರುತ್ತಿದ್ದ ಲಾರಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರ ಮೇಲೆ ಹರಿದಿದೆ. ಪರಿಣಾಮ, ಯುವತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ಯುವಕನನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರೂ ಮೃತಪಟ್ಟಿದ್ದಾರೆ.


