Thursday, December 25, 2025
Google search engine
Homeರಾಜ್ಯಬೆಂಗಳೂರಿನಲ್ಲಿ ನವೆಂಬರ್‌ 4 ರಿಂದ ಮೊಟ್ಟ ಮೊದಲ ಕೌಶಲ್ಯ ಶೃಂಗಸಭೆ

ಬೆಂಗಳೂರಿನಲ್ಲಿ ನವೆಂಬರ್‌ 4 ರಿಂದ ಮೊಟ್ಟ ಮೊದಲ ಕೌಶಲ್ಯ ಶೃಂಗಸಭೆ

ಬೆಂಗಳೂರು: ಕೌಶಲ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿರುವ ನಮ್ಮ ಸರ್ಕಾರ ಮುಂದಿನ ನವೆಂಬರ್‌ನಲ್ಲಿ ಬೆಂಗಳೂರು ಕೌಶಲ್ಯ ಶೃಂಗಸಭೆ 2025 ಆಯೋಜಿಸುತ್ತಿದೆ. ಕೌಶಲ್ಯತೆ, ನಾವೀನ್ಯತೆ ಮತ್ತು ವಿಶೇಷ ಸೌಲಭ್ಯಗಳ ತಾಣವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ. ಶರಣ ಪ್ರಕಾಶ್ ಆರ್‌. ಪಾಟೀಲ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ನವೆಂಬರ್ 4 ರಿಂದ 6 ರವರೆಗೆ ಈ ಶೃಂಗಸಭೆ ನಡೆಯಲಿದೆ. ಇದೇ ಮೊದಲ ಬಾರಿಗೆ ಇಂಥ ಮಹತ್ವಾಕಾಂಕ್ಷೆಯ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಈ ಶೃಂಗಸಭೆಗೆ ಚಾಲನೆ ನೀಡಲಿದ್ದಾರೆ ಎಂದರು.

“ಬೆಂಗಳೂರು ಕೌಶಲ್ಯ ಶೃಂಗಸಭೆಯ ಮೂಲಕ ಯುವ ಸಮುದಾಯಕ್ಕೆ ಮುಖ್ಯವಾಗಿ ಮಹಿಳೆಯರು, ಗ್ರಾಮೀಣ ಸಮುದಾಯಗಳು ಮತ್ತು ಅಂಗವಿಕಲರಿಗೆ ಹೆಚ್ಚು ಆದ್ಯತೆ ನೀಡಲು ಗಮನಹರಿಸಲಾಗುವುದು. ಕೌಶಲ್ಯದ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಲು ನಮ್ಮ ಸರ್ಕಾರ ಅವಕಾಶಗಳ ಬೃಹತ್‌ ವೇದಿಕೆ ಒದಗಿಸುತ್ತಿದೆ ಎಂದು ಡಾ. ಪಾಟೀಲ್‌ ವಿವರಿಸಿದರು.

ಕೈಗಾರಿಕೆ, ಶೈಕ್ಷಣಿಕ, ತರಬೇತಿ ಮತ್ತು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಯುವ ಸಮೂಹವನ್ನು ಬೆಳೆಸಲು ಹಾಗೂ ಉದ್ಯೋಗವನ್ನು ಹೆಚ್ಚಿಸುವ ಗುರಿಯನ್ನು ಈ ಶೃಂಗಸಭೆ ಹೊಂದಿದೆ ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದನೆ

ಕರ್ನಾಟಕದಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೀಗಾಗಿ ಕೌಶಲ್ಯ ಶೃಂಗಸಭೆ ಆಯೋಜಿಸಬೇಕು ಎಂದು ಈ ಹಿಂದೆಯೇ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಸ್ಕಿಲ್‌ ಸಮ್ಮಿಟ್‌ ಕಾರ್ಯರೂಪಕ್ಕೆ ಬರುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ (KSDA) ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಜಂಟಿ ಸಹಯೋಗದೊಂದಿಗೆ ಈ ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಕೌಶಲ್ಯ ನೀತಿ

ಮುಂಬರುವ ದಿನಗಳಲ್ಲಿ ಕೌಶಲ್ಯ ನೀತಿ ರೂಪಿಸಲಾಗುತ್ತದೆ. ಕರ್ನಾಟಕದಲ್ಲಿ ಮಾನವ ಸಂಪನ್ಮೂಲ ಅಗಾಧವಾಗಿದೆ. ಅದಕ್ಕೆ ಸ್ಪಷ್ಟ ರೂಪ, ಕೌಶಲ್ಯ ತರಬೇತಿ ನೀಡಿದರೆ ನಮ್ಮ ರಾಜ್ಯ ಮತ್ತು ನಮ್ಮ ರಾಜಧಾನಿ ಅತ್ಯಂತ ವೇಗವಾಗಿ ಬೆಳೆಯುವ ವಿಶ್ವಾಸವಿದೆ ಎಂದರು.

ಯುವ ಸಮೂಹಕ್ಕೆ ಅತ್ಯುತ್ತಮ ವೇದಿಕೆ

ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಇ.ವಿ. ರಮಣ ರೆಡ್ಡಿ ಮಾತನಾಡಿ, ಯುವನಿಧಿ ಗ್ಯಾರಂಟಿ ಯೋಜನೆಯಿಂದ ಸಾವಿರಾರು ಯುವಕರಿಗೆ ಅನುಕೂಲವಾಗಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಬೇಕು ಎನ್ನುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಈ ರೀತಿಯ ವಿಶೇಷ ತರಬೇತಿ ದೊರೆತರೆ ಯುವ ಸಮೂಹ ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಉದ್ಯೋಗ ಗಿಟ್ಟಿಸಲು ಸಮರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಕೌಶಲ್ಯ ಶೃಂಗಸಭೆ ಅತ್ಯುತ್ತಮ ವೇದಿಕೆ ಒದಗಿಸಲಿದೆ ಎಂದು ತಿಳಿಸಿದರು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಿವಕಾಂತಮ್ಮ ನಾಯಕ್, ಕೌಶಲ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎನ್.ಎಂ. ನಾಗರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments