Wednesday, December 24, 2025
Google search engine
Homeರಾಜ್ಯಸರಕಾರಿ ಕನ್ನಡ ಶಾಲೆ ಮುಚ್ಚಲ್ಲ, 11 ಸಾವಿರ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

ಸರಕಾರಿ ಕನ್ನಡ ಶಾಲೆ ಮುಚ್ಚಲ್ಲ, 11 ಸಾವಿರ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

ಬೆಳಗಾವಿ: ರಾಜ್ಯದಲ್ಲಿ ಯಾವುದೇ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಗುರುವಾರ ವಿಧಾನಸಭೆಯಲ್ಲಿ ಶಾಸಕ ಶರಣು ಸಲಗರ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದರು.

ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಯಾವುದೇ ಉದ್ದೇಶ ಸರಕಾರಕ್ಕೆ ಇಲ್ಲ. ಕನ್ನಡ ಭಾಷೆಯನ್ನು ಉತ್ತೇಜಿಸುವುದಕ್ಕೆ ಸರಕಾರ ಮುಂದಾಗಿದ್ದು, ಇದರ ಜತಗೆ ಕನ್ನಡ ಮಾಧ್ಯಮ ಶಾಲೆಗಳನ್ನು ಅಭಿವೃದ್ದಿಗೆ ಸರಕಾರ ಶ್ರಮಿಸಲಿದೆ. ಹೊಸ ತಾಲ್ಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.

ಹೊಸದಾಗಿ ರಚನೆ ಆಗಿರುವ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳ ಕಚೇರಿ ಪ್ರಾರಂಭ ಮಾಡುವ ಕುರಿತು ಪ್ರಸ್ತಾವವನ್ನು ಹಣಕಾಸು ಇಲಾಖೆಯ ಸಹಮತಿಗಾಗಿ ಕಳಿಸಿಕೊಡಲಾಗಿದೆ ಎಂದರು.

ಹೊಸದಾಗಿ ರಚನೆ ಮಾಡಲಾಗಿರುವ ಕಂದಾಯ ತಾಲ್ಲೂಕುಗಳಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿಯನ್ನು ಪ್ರಾರಂಭಿಸುವ ಪ್ರಸ್ತಾವಕ್ಕೆ ಹಿಂಬರ ಬಂದಿದ್ದು, ಮುಂದೂಡುವಂತೆ ಹಾಗೂ ಬಹುತೇಕ ಇಲಾಖೆಗಳು ಗಣಕೀಕೃತ ಆಗಿರುವುದರಿಂದ ಎಲ್ಲ ತಾಲ್ಲೂಕಗಳಲ್ಲಿ ಭೌತಿಕ ಕಚೇರಿಗಳನ್ನು ಹೊಂದುವ ಅಗತ್ಯತೆ ಬಗ್ಗೆ ಮರು ಪರಿಶೀಲನೆ ಮಾಡುವಂತೆ ತಿಳಿಸಿದೆ ಎಂದರು.

ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅನುಪಾತವು 40;1 ಆಗಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಶಿಕ್ಷಕರ ಅನುಪಾತವು 16;1 ಆಗಿದೆ. ಶಾಲೆಗಳಲ್ಲಿ ಬೋಧನೆ ಮಾಡಲು ಈಗಾಗಲೇ ನುರಿತ ಶಿಕ್ಷಕರು ಪಾಠ ಬೋಧನೆ ಮಾಡುತ್ತಿದ್ದಾರೆ. ಮಕ್ಕಳ ಕಲಿಕಾ ಚಟುವಟಿಕೆ ಮೇಲೆ ಯಾವುದೇ ಪರಿಣಾಮ ಬಿರಲ್ಲ. ರಾಜ್ಯದಲ್ಲಿ 41088 ಪ್ರಾಥಮಿಕ ಶಾಲೆಗಳು ಇದ್ದು, 1,78935 ಹುದ್ದೆಗಳು ಮಂಜೂರಿ ಆಗಿದ್ದು, ಈ ಪೈಕಿ 1,33345 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಬಾಕಿ ಉಳಿದ 45590 ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದರು.

ಇಂಗ್ಲಿಷ್ ಮಾಧ್ಯಮ ಶಿಕ್ಷಕರ ಇಂಡಕ್ಷನ್ ಕಾರ್ಯಕ್ರಮ

ಇಂಗ್ಲಿಷ್ ಮಾಧ್ಯಮ ಶಿಕ್ಷಕರ ಇಂಡಕ್ಷನ್ ಕಾರ್ಯಕ್ರಮ ತರಬೇತಿಯು ಎಲ್ಲ ಸರಕಾರಿ ಶಾಲಾ ಶಿಕ್ಷಕರನ್ನು ಆಂಗ್ಲ ಮಾಧ್ಯಮ ವಿಭಾಗಗಳಿಗೆ ಸಜ್ಜುಗೊಳಿಸಲು, ವಿಶೇಷವಾಗಿ ಗ್ರಾಮೀಣ ಹಿನ್ನಲೆಯಿಂದ ಬಂದ ವೈವಿಧ್ಯಮ ಕಲಿಕೆಯವರಿಗೆ ಆಂಗ್ಲ ಭಾಷೆಯ ಪ್ರಾವೀಣ್ಯತೆ ಆತ್ಮವಿಶ್ವಾಸ, ಡಿಜಿಟಲ್ ಕೌಶಲ ಹಾಗೂ ಬೋಧನಾ ವಿಧಾನಗಳನ್ನು ರೂಪಿಸಲು ಗಮನ ನೀಡಲಾಗುತ್ತದೆ. ಈ ಮೂಲಕ ತರಗತಿಯ ಬೋಧನೆ ಮತ್ತು ಆಂಗ್ಲ ಭಾಷೆಯ ಕಲಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ. ಮುಂದಿನ ಶೈಕ್ಷಣಿಕ ಸಾಲಿನವರಗೆ ಎಲ್ಲಾ ಶಿಕ್ಷಕರನ್ನು ದ್ವಿ-ಭಾಷಾ ಮಾಧ್ಯಮ ಬೋಧನೆಗೆ ತರಬೇತುಗೊಳಿಸಲು ಯೋಜಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

11 ಸಾವಿರ ಶಿಕ್ಷಕರ ನೇಮಕಾತಿ

ಬೆಳಗಾವಿ ಸುವರ್ಣ ವಿಧಾನಸೌಧ: ಬರುವ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ ಪೂಂಜ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು.

ರಾಜ್ಯದಲ್ಲಿ 5024 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಈ ಪ್ರೌಢಶಾಲೆಗಳಿಗೆ 44,144 ಹುದ್ದೆಗಳು ಮಂಜೂರಿ ಆಗಿವೆ. ಈ ಪೈಕಿ 32010 ಹುದ್ದೆಗಳು ಭರ್ತಿ ಆಗಿದ್ದು, 12,134 ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳಗೆ ಬದಲಾಗಿ 2025-2026ನೇ ಶೈಕ್ಷಣಿಕ ಸಾಲಿಗೆ ಪ್ರಾಥಮಿಕ ಶಾಲೆಗಳಲ್ಲಿ 40,000 ಮತ್ತು ಪ್ರೌಢಶಾಲೆಗಳಲ್ಲಿ 11,000 ಒಟ್ಟಾರೆಯಾಗಿ 51,000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವ ಮೂಲಕ ಶಿಕ್ಷಕರ ಕೊರತೆ ಸರಿದೂರಿಸಲಾಗಿದೆ. ವಿಕಲಚೇತನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ವಿಶೇಷ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ಕಲ್ಯಾಣ ಕರ್ನಾಟಕದಲ್ಲಿಯೂ ನೇಮಕ

2025-26ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ 5267 ಶಿಕ್ಷಕರ ಹುದ್ದೆಗಳಿಗೆ ಹಾಗೂ ರಾಜ್ಯದ ಇತರೆ ಭಾಗದಲ್ಲಿ ಖಾಲಿ ಇರುವ 5000 ಹುದ್ದೆಗಳನ್ನು ನೇಮಕ ಮಾಡಲು ಕ್ರಮ ವಹಿಸಲಾಗಿದ್ದು, ಸದರಿ ಹುದ್ದೆಗಳಲ್ಲಿ ದ್ವಿ-ಭಾಷಾ ಮಾಧ್ಯಮ ಭೋಧನೆಗೆ ಶಿಕ್ಷಕರನ್ನು ನಿಯಮಾನುಸಾರ ನೇಮಕ ಮಾಡಲು ಆದ್ಯತೆ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments