ಬೆಳಗಾವಿ: ಪ್ರತಿಪಕ್ಷ ಬಿಜೆಪಿ ಸದಸ್ಯರ ತೀವ್ರ ವಿರೋಧ ಮತ್ತು ಪ್ರತಿಭಟನೆ ಸಭಾತ್ಯಾಗದ ನಡುವೆ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರಗೊಂಡಿತು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಂಡನೆಯಾಗಿದ್ದ ವಿಧೇಯಕ ಕುರಿತು ವಿವರಣೆ ನೀಡಿದರು. ಆ ಬಳಿಕ ವಿಪಕ್ಷ ನಾಯಕ ಆರ್. ಅಶೋಕ್ ಅದಕ್ಕೆ ವಿರೋಧ ವ್ಯಕ್ತಪಡಿಸಿ ಡಾ. ಹೆಚ್. ಸಿ. ಮಹಾದೇವಪ್ಪ ಮಂಡಿಸಿದ್ದು ಜನಪರ ವಿಧೇಯಕ, ಪರಮೇಶ್ವರ ಅವರು ಮಂಡಿಸಿದ್ದು ದ್ವೇಷ ಹುಟ್ಟಿಸುವ ವಿಧೇಯಕ ಎಂದು ಆರೋಪಿಸಿದರು.
ಇದೇ ವೇಳೆ ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಪಕ್ಷವೇ ಎಂದು ಶಾಸಕ ಸುರೇಶ್ ಕುಮಾರ್ ಆರೋಪಿಸಿದರು. ಇದಕ್ಕೆ ತಿರುಗೇಟು ಕೊಟ್ಟ ಸಚಿವ ಸಂತೋಷ ಲಾಡ್, ಅಂಬೇಡ್ಕರ್ ಅವರನ್ನು ಕಾನೂನು ಮಂತ್ರಿ ಮಾಡಿದ್ದು, ಕಾಂಗ್ರೆಸ್ ಎಂದರು. ಆಗ ಆಡಳಿತ – ವಿಪಕ್ಷ ಸದಸ್ಯರ ನಡುವೆ ಗದ್ದಲ ಶುರುವಾಯಿತು.
ಮತ್ತೆ ಆರ್. ಅಶೋಕ್ ತಮ್ಮ ಭಾಷಣ ಮುಂದುವರಿಸುತ್ತಿದ್ದಂತೆ ಸಚಿವ ಬೈರತಿ ಸುರೇಶ್, ಕರಾವಳಿಯಲ್ಲಿ ಬೆಂಕಿ ಹಾಕಿದವರು, ಇಲ್ಲಿಯೂ ಬಂದು ಬೆಂಕಿ ಹಾಕಬೇಡಿ ಎಂದು ಆಡಿದ ಮಾತು ಬಿಜೆಪಿ ಶಾಸಕರನ್ನು ಕೆರಳಿಸಿತು.
ಅದರಲ್ಲೂ ಕರಾವಳಿ ಶಾಸಕರು ಅಕ್ಷರಶಃ ಸಿಡಿದೆದ್ದರು. ಯಾರು ಬೆಂಕಿ ಹಚ್ಚಿದ್ದು..? ಇಡೀ ಕರಾವಳಿ ಬಗ್ಗೆ ಅಪಮಾನ ಮಾಡಿದ್ದಾರೆ. ಮೊದಲ ದ್ವೇಷ ಭಾಷಣ ಕೇಸ್ ಬೈರತಿ ಸುರೇಶ್ ಮೇಲೆಯೇ ಹಾಕಬೇಕು ಎಂದು ಅವರ ಮೇಲೆ ಬಿಜೆಪಿ ಸದಸ್ಯರು ಒಟ್ಟಾಗಿ ಮುಗಿ ಬಿದ್ದರು. ಒಂದು ಹಂತದಲ್ಲಿ ಸ್ಪೀಕರ್ ಅವರ ಮೇಲೆಯೂ ಅಸಮಾಧಾನ ವ್ಯಕ್ತಪಡಿಸಿದರು. ನೀವು ಕರಾವಳಿ ಅವರಾಗಿ ಸುಮ್ಮನೆ ಕುಳಿತಿದ್ದೀರಿ. ನಮ್ಮ ಕರಾವಳಿಗೆ ಕೆಟ್ಟ ಹೆಸರು ತರುವ ಮಾತನಾಡಿದ್ದಾರೆ ಎಂದರು.
ವಿಧೇಯಕ ಅಂಗೀಕಾರ:
ಆ ಮಾತನ್ನು ಕಡತದಿಂದ ತೆಗೆಯುವುದಾಗಿ ಸ್ಪೀಕರ್ ಹೇಳಿದರೂ ಸಮಾಧಾನ ಆಗದ ಬಿಜೆಪಿ ಸದಸ್ಯರು ಆರ್. ಅಶೋಕ ನೇತೃತ್ವದಲ್ಲಿ ಸದನದ ಭಾವಿಗಿಳಿದು ಧರಣಿ ಶುರು ಮಾಡಿದರು.
ಆಗ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಪ್ರತಿ ಹರಿದು ಹಾಕಿದರು. ಅವರ ವಿರೋಧದ ನಡುವೆಯೂ ವಿಧೇಯಕ ಅಂಗೀಕಾರಗೊಂಡಿತು.
ಸ್ವಾತಂತ್ರ್ಯದ ಅತಿಕ್ರಮಣ:
ಇದಕ್ಕೂ ಮೊದಲು ಮಾತನಾಡಿದ್ದ ಆರ್. ಅಶೋಕ್, ಈ ವಿಧೇಯಕವು ಸಂವಿಧಾನದ 19(1) ವಿಧಿಯ ಸ್ಪಷ್ಟ ಉಲ್ಲಂಘನೆ ಆಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ. ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳನ್ನು ಗುರಿಯಾಗಿಸಿ, ಒಂದು ರೀತಿ ಮತ್ತೆ ತುರ್ತು ಪರಿಸ್ಥಿತಿ ಘೋಷಣೆ ಮಾಡುತ್ತಿದ್ದಾರೆ. ಈಗಾಗಲೇ ನಮ್ಮಲ್ಲಿ ದ್ವೇಷ ಭಾಷಣ ವಿಚಾರದಲ್ಲಿ ಕಾಯ್ದೆ ಇದೆ. ಹಾಗಾಗಿ, ಇದರ ಅವಶ್ಯಕತೆ ಇರಲಿಲ್ಲ. ಆದರೆ, ರಾಜಕೀಯ ದ್ವೇಷ ಸಾಧಿಸುವ ಬ್ರಹ್ಮಾಸ್ತ್ರದಂತೆ ಬಳಸಿಕೊಳ್ಳುವ ಹುನ್ನಾರ ಇದೆ ಎಂದು ಆರೋಪಿಸಿದರು.
ದ್ವೇಷ ಅಪರಾಧ’ ಎಂದರೆ ಏನು.?
ಈ ಪದ ನಾನು ಯಾವುದೇ ಡಿಕ್ಸನರಿಯಲ್ಲಿ ನೋಡಿಲ್ಲ. ಈ ಸರ್ಕಾರ ಒಂದು ಕೋಮಿನ ಮೇಲೆ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಪ್ರಯೋಗಿಸಿದರೆ, ಮುಂದೆ ಬರುವ ಸರ್ಕಾರ ಮತ್ತೊಂದು ಕೋಮಿನ ಮೇಲೆ ಪ್ರಯೋಗಿಸುತ್ತದೆ. ಇದರಿಂದ ರಾಜ್ಯಕ್ಕೆ ಯಾವುದೇ ರೀತಿ ಒಳ್ಳೆಯದು ಆಗುವುದಿಲ್ಲ ಎಂದು ಆರ್. ಅಶೋಕ್ ಹರಿಹಾಯ್ದರು.
ಎಷ್ಟೋ ಕೊಲೆಗಳಾಗಿವೆ
ವಿಧೇಯಕ ಕುರಿತು ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಮಾಜಕ್ಕೆ ನೋವುಂಟು ಮಾಡುವ ರೀತಿಯಲ್ಲಿ ಇತ್ತೀಚಿಗೆ ಕೆಲವರು ಮಾತನಾಡುತ್ತಿದ್ದಾರೆ. ದ್ವೇಷ ಭಾಷಣದಿಂದ ಎಷ್ಟೋ ಕೊಲೆಗಳಾಗಿವೆ. ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ದ್ವೇಷ ಭಾಷಣ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ, ಕೋಮು ಗಲಭೆ, ಕಾನೂನು ಸುವ್ಯವಸ್ಥೆ ಹದಗೆಡುವುದನ್ನು ತಡೆಯುವ ನಿಟ್ಟಿನಲ್ಲಿ ಇದೆಲ್ಲವನ್ನು ತಡೆಗಟ್ಟಬೇಕು ಅಂತಾ ‘ದ್ವೇಷ ಅಪರಾಧಗಳು ಮತ್ತು ದ್ವೇಷ (ಹೋರಾಟ, ತಡೆಯುವಿಕೆ) ವಿಧೇಯಕ- 2025’ ಮಂಡಿಸಲಾಗುತ್ತಿದೆ ಎಂದರು.
ವಿಧೇಯಕದಡಿ ಶಿಕ್ಷಾರ್ಹ:
ಜನಾಂಗೀಯ ನಿಂದನೆ, ಭಾಷೆ, ಜನ್ಮಸ್ಥಳ, ಜಾತಿ, ಧರ್ಮ ಆಧರಿಸಿ ದ್ವೇಷದ ಅಪರಾಧ ಮತ್ತು ದ್ವೇಷ ಭಾಷಣ ಮಾಡುವುದು ಈ ವಿಧೇಯಕದಡಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಪ್ರಸ್ತಾಪಿತ ಮಸೂದೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು, ಸರ್ಚ್ ಇಂಜಿನ್ಗಳು, ಟೆಲಿಕಾಂ ಆಪರೇಟರ್ಗಳು, ಆನ್ಲೈನ್ ಮಾರುಕಟ್ಟೆ ಸ್ಥಳಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರು ಸೇರಿ ಡಿಜಿಟಲ್ ಮಧ್ಯವರ್ತಿಗಳು ಅವರು ಪೋಸ್ಟ್ ಮಾಡುವ ವಿಷಯಕ್ಕೆ ಹೊಣೆಗಾರರಾಗಿರುತ್ತಾರೆ. ನೋಂದಾಯಿತ ಹಾಗೂ ನೋಂದಾಯಿತಯವಲ್ಲದ ಸಂಘ – ಸಂಸ್ಥೆಗಳು ಹೊಣೆಗಾರರಾಗಿರುತ್ತಾರೆ.
ದ್ವೇಷ ಭಾಷಣ ಎಂದರೇನು?
ಯಾವುದೇ ವ್ಯಕ್ತಿ ಪೂರ್ವಕಲ್ಪಿತ ಹಿತಾಸಕ್ತಿಯನ್ನು ಸಾಧಿಸುವ ಉದ್ದೇಶದಿಂದ ಬದುಕಿರುವ ವ್ಯಕ್ತಿ ಅಥವಾ ಮೃತ ವ್ಯಕ್ತಿಗಳ ವರ್ಗ ಅಥವಾ ಗುಂಪು ಅಥವಾ ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ ಅಥವಾ ವೈರುದ್ಯದ ಅಥವಾ ದ್ವೇಷದ, ಕೆಡುಕಿನ ಭಾವನೆ ಮೂಡಿಸುವ ಉದ್ದೇಶದೊಂದಿಗೆ ಸಾರ್ವಜನಿಕ ನೋಟದಲ್ಲಿ ಮೌಖಿಕವಾಗಿ, ಲಿಖಿತ ರೂಪದ ಪದದಲ್ಲಿ ಅಥವಾ ಸಂಕೇತಗಳ ಮೂಲಕ ಅಥವಾ ದೃಶ್ಯರೂಪಕಗಳ ಮೂಲಕ ಅಥವಾ ವಿದ್ಯುನ್ಮಾನ ಸಂವಹನಗಳ ಮೂಲಕ ಅಥವಾ ಇನ್ನಾವುದೇ ರೀತಿಯಲ್ಲಿ ಮಾಡಲಾದ, ಪ್ರಕಟಿಸಲಾದ ಯಾವುದೇ ಮಾತು ದ್ವೇಷ ಭಾಷಣವಾಗಲಿದೆ.
ಗುಂಪು ದ್ವೇಷ ಅಪರಾಧ
ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಉಪ ಪೊಲೀಸ್ ವರಿಷ್ಠಾಧಿಕಾರಿ ದರ್ಜೆಗಿಂತ ಕಡಿಮೆಯಲ್ಲದ, ಯಾರೇ ಪೊಲೀಸ್ ಅಧಿಕಾರಿಯು ಮಾಹಿತಿ ಸ್ವೀಕರಿಸಿದ ಬಳಿಕ ಅಧಿಕಾರ ವ್ಯಾಪ್ತಿಯ ಸ್ಥಳೀಯ ಪರಿಮಿತಿಗಳ ಒಳಗೆ ಓರ್ವ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ದ್ವೇಷ ಅಪರಾಧವನ್ನು ಮಾಡುವ ಸಂಭವವಿದೆಯೆಂದು ಅಥವಾ ಯಾವುದೇ ಅಪರಾಧವನ್ನು ಮಾಡುವುದಾಗಿ ಬೆದರಿಕೆಯೊಡ್ಡಿರುವುದು ಗೊತ್ತಾದರೆ ಸಾರ್ವಜನಿಕ ಸುವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬಹುದಾಗಿದೆ.
ಡಿವೈಎಸ್ಪಿ/ಎಸಿಪಿ ಮೇಲ್ಪಟ್ಟ ಅಧಿಕಾರಿಗಳು ಸಾಮಾಜಿಕ ಜಾಲತಾಣ, ಡಿಜಿಟಲ್ ಪ್ಲಾಟ್ ಫಾರಂಗಳು, ವಿದ್ಯುನ್ಮಾನ ಮಾಧ್ಯಮವೂ ಸೇರಿ ವ್ಯಕ್ತಿ ಅಥವಾ ಸಂಸ್ಥೆಗೆ ತನ್ನ ಡೊಮೇನ್ನಿಂದ ದ್ವೇಷ ಭಾಷಣ, ಅಪರಾಧದ ವಿಷಯಗಳನ್ನು ಬ್ಲಾಕ್ ಮಾಡಲು ಅಥವಾ ತೆಗೆದು ಹಾಕಲು ನಿರ್ದೇಶಿಸುವ ಅಧಿಕಾರ ಹೊಂದಿರಲಿದೆ.
ಗರಿಷ್ಠ 7 ವರ್ಷ ಜೈಲು ಶಿಕ್ಷೆ :
ಈ ಮಸೂದೆ ಪ್ರಕಾರ ದ್ವೇಷ ಭಾಷಣ ಮಾಡಿದರೆ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸುವ ನಿಯಮ ರೂಪಿಸಲಾಗಿದೆ. ದ್ವೇಷ ಭಾಷಣ ಮೂಲಕ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ನಿವಾಸ, ಅಂಗವೈಕಲ್ಯ, ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆ ವಿಧಿಸುವ ಅಂಶ ಇದೆ. ಗರಿಷ್ಠ 1 ಲಕ್ಷ ರೂ. ದಂಡದ ಜತೆಗೆ ಶಿಕ್ಷೆ ವಿಧಿಸಬಹುದು ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಮೊದಲ ಬಾರಿಗೆ ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷದಿಂದ ಗರಿಷ್ಟ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. 50 ಸಾವಿರ ರೂ. ದಂಡ ವಿಧಿಸಬಹುದಾಗಿದೆ. ದ್ವೇಷ ಅಪರಾಧ ಪುನರಾವರ್ತನೆಯಾದರೆ ಕನಿಷ್ಠ 2 ವರ್ಷದಿಂದ ಗರಿಷ್ಠ 7 ವರ್ಷದವರೆಗೆ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.
ದ್ವೇಷ ಭಾಷಣ ಮಾಡಿ ಕೇಸ್ ಬಿದ್ದರೆ ಅದು ಜಾಮೀನು ರಹಿತ ಪ್ರಕರಣವಾಗಿದೆ. ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರ್ ಮೂಲಕ ದ್ವೇಷ ಭಾಷಣಗಳ ವಿಚಾರಣೆ ಮಾಡಬೇಕು ಎಂಬುದನ್ನು ಈ ವಿಧೇಯಕ ಹೊಂದಿದೆ ಎಂದು ಡಾ. ಜಿ. ಪರಮೇಶ್ವರ್ ವಿವರಿಸಿದರು.


