ಬೆಂಗಳೂರು: ಸಚಿವ ಕೆಎನ್ ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ ಪ್ರಕರಣದ ಕುರಿತು ಸಿಎಂ ಹಾಗೂ ಕಾನೂನು ತಜ್ಞರ ಜೊತೆ ಚರ್ಚಿಸಿ ಯಾವ ರೀತಿಯ ತನಿಖೆ ನಡೆಸಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ತಮ್ಮನ್ನು ಭೇಟಿಯಾದ ಸಹಕಾರ ಸಚಿವ ಕೆಎನ್ ರಾಜಣ್ಣ ತನಿಖೆಗೆ ಆಗ್ರಹಿಸಿ ಸಲ್ಲಿಸಿದ ಮನವಿ ಸ್ವೀಕರಿಸಿದ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣ ವಿಧಾನಸಭೆಯಲ್ಲಿ ಚರ್ಚೆ ಆಗಿದೆ. ಸ್ಪೀಕರ್ ತನಿಖೆಗೆ ಆಗ್ರಹಿಸಿರುವುದರಿಂದ ಸುಮೊಟೊ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದರು.
ರಾಜಣ್ಣ ಅವರು ನನ್ನನ್ನು ಭೇಟಿ ಮಾಡಿ ತನಿಖೆಗೆ ಆಗ್ರಹಿಸಿ ಮನವಿ ಪತ್ರ ಕೊಟ್ಟಿದ್ದಾರೆ. ಅವರು ದೂರು ಕೊಟ್ಟಿಲ್ಲ. ದೂರು ಕೊಡಬೇಕಾದರೆ ಪೊಲೀಸ್ ಠಾಣೆಗೆ ಹೋಗಬೇಕು. ನಾನು ದೂರು ಸ್ವೀಕರಿಸುವಂತಿಲ್ಲ. ಅವರ ಮನವಿ ಆಧರಿಸಿ ನಾನು ಸಿಎಂ ಹಾಗೂ ಕಾನೂನು ತಜ್ಞರ ಜೊತೆ ಚರ್ಚಿಸಿ ಯಾವ ರೀತಿಯ ತನಿಖೆ ನಡೆಸಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.
ಎಲ್ಲಾ ಪಕ್ಷದವರು ಹನಿಟ್ರ್ಯಾಪ್ ನಲ್ಲಿ ಸಿಲುಕಿದ್ದಾರೆ. ವಿಪಕ್ಷಗಳ ನಾಯಕರು ತಡೆಯಾಜ್ಞೆ ತಂದಿದ್ದಾರೆ. ಆದ್ದರಿಂದ ಎಲ್ಲಾ ಪ್ರಕರಣಗಳನ್ನು ತನಿಖೆ ಮಾಡಲು ಆಗುವುದಿಲ್ಲ. ಅಲ್ಲದೇ ಒಂದೊಂದು ಪ್ರಕರಣ ಒಂದೊಂದು ರೀತಿ ಇರುವುದರಿಂದ ಎಲ್ಲಾ ಸಾಧಕ-ಬಾಧಕಗಳನ್ನು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.


