Wednesday, December 24, 2025
Google search engine
Homeರಾಜ್ಯಖಾಸಗಿ ಲೇಔಟ್ ಗಳಿಗೆ ಡೆವಲಪರ್ ಗಳಿಂದಲೇ ಮೂಲಸೌಕರ್ಯ: ಸಚಿವ ಸುರೇಶ್

ಖಾಸಗಿ ಲೇಔಟ್ ಗಳಿಗೆ ಡೆವಲಪರ್ ಗಳಿಂದಲೇ ಮೂಲಸೌಕರ್ಯ: ಸಚಿವ ಸುರೇಶ್

ವಿಧಾನಪರಿಷತ್ತು: ಖಾಸಗಿ ಬಡಾವಣೆಗಳನ್ನು ನಿರ್ಮಾಣ ಮಾಡುವ ಸಂಸ್ಥೆಯವರೇ ನಿವೇಶನದಾರರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದ್ದಾರೆ.

ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ವೈ.ಎಂ.ಸತೀಶ್ ಅವರು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಬಡಾವಣೆಗಳಿಗೆ ಅನುಮತಿ ವಿಳಂಬದ ಬಗ್ಗೆ ಪ್ರಸ್ತಾಪಿಸಿ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಯಾವುದೇ ಖಾಸಗಿ ಬಡಾವಣೆಗಳು ರೆರಾದಲ್ಲಿ ನೋಂದಣಿ ಆಗಬೇಕು. ಪ್ರಾಥಮಿಕವಾಗಿ ಅಗತ್ಯ ಮಾನದಂಡಗಳನ್ನು ಪೂರೈಸಿದ ನಂತರ ಶೇ.40 ರಷ್ಟು ನಿವೇಶನಗಳಿಗೆ ಅನುಮೋದನೆ ನೀಡಲಾಗುತ್ತದೆ. ನಂತರದಲ್ಲಿ ಬಡಾವಣೆ ನಕ್ಷೆ, ನಿವೇಶನಗಳ ಸಂಖ್ಯೆ, ಮೂಲಸೌಕರ್ಯ ಸೇರಿದಂತೆ ಇನ್ನಿತರ ಮಾನದಂಡಗಳನ್ನು ಪೂರೈಸಿರುವುದನ್ನು ಗಮನಿಸಿ ಉಳಿದ ಶೇ.60 ರಷ್ಟು ಬಡಾವಣೆಗೆ ಮಂಜೂರಾತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಖಾಸಗಿ ಬಡಾವಣೆಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರಗಳು ಅನುಮೋದನೆ ನೀಡಿದ್ದರೂ ಆ ಬಡಾವಣೆಗಳಿಗೆ ಕುಡಿಯುವ ನೀರು, ಒಳಚರಂಡಿ, ರಸ್ತೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಒದಗಿಸುವ ಸಂಪೂರ್ಣ ಜವಾಬ್ದಾರಿ ಖಾಸಗಿ ಬಡಾವಣೆ ನಿರ್ಮಿಸಿದ ಸಂಸ್ಥೆಯದ್ದೇ ಆಗಿರುತ್ತದೆ. ಇಂತಹ ಬಡಾವಣೆಗಳು ನಗರಾಭಿವೃದ್ಧಿ ಪ್ರಾಧಿಕಾರಗಳ ಸುಪರ್ದಿಗೆ ಬಂದು ನಿಗದಿತ ತೆರಿಗೆ ಪಾವತಿಸುವ ದಿನದಿಂದ ಮೂಲಸೌಕರ್ಯಗಳನ್ನು ಪ್ರಾಧಿಕಾರಗಳು ಒದಗಿಸಲಿವೆ ಎಂದು ವಿವರಣೆ ನೀಡಿದರು.

ಸಿಂಧನೂರು ಪಟ್ಟಣಕ್ಕೆ ನೀರು ಪೂರೈಕೆಗೆ ಬದ್ಧ

ಸದಸ್ಯ ಬಸನಗೌಡ ಬಾದರ್ಲಿ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ಬಿ.ಎಸ್.ಸುರೇಶ್ ಅವರು, ಸಿಂಧನೂರು ನಗರದ ನಾಗರಿಕರಿಗೆ ಕುಡಿಯುವ ನೀರು ಪೂರೈಕೆಗಾಗಿ 2014 ರಲ್ಲೇ ದೆಹಲಿ ಮೂಲದ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆಯನ್ನು ನೀಡಲಾಗಿತ್ತು. ಆದರೆ, ಆ ಗುತ್ತಿಗೆದಾರ ನೆಪವೊಡ್ಡಿ ಕಾಮಗಾರಿಯನ್ನು ಮಾಡಿರಲಿಲ್ಲ. ಹೀಗಾಗಿ ಗುತ್ತಿಗೆಯನ್ನು ರದ್ದು ಮಾಡಲಾಗಿತ್ತು. ಆದರೆ, ಕೋಲ್ಕತ್ತಾ ನ್ಯಾಯಾಲಯದಿಂದ ರದ್ದು ಮಾಡಿದ ಸರ್ಕಾರದ ನಿರ್ಧಾರಕ್ಕೆ ತಡೆಯಾಜ್ಞೆ ತಂದಿದ್ದರು. ಇದೀಗ ನ್ಯಾಯಾಲಯ ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವತಿಯಿಂದಲೇ ನಗರದ ನಾಗರಿಕರಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments