ಬೆಳಗಾವಿ: ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ಕರ್ನಾಟಕ ಬಾಡಿಗೆ ಅಧಿನಿಯಮ, 1999ನ್ನು ಮತ್ತಷ್ಟು ತಿದ್ದುಪಡಿ ಮಾಡುವ, 2025ನೇ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕವನ್ನು ಮೇಲ್ಮನೆಯಲ್ಲಿ ಡಿ.17ರಂದು ಅಂಗೀಕರಿಸಲಾಯಿತು.
ಬಾಡಿಗೆ ಹೆಸರಿನಲ್ಲಿ ಕೆಲ ಕಡೆಗಳಲ್ಲಿ ಆಘಾತಕಾರಿ ಪ್ರಕರಣಗಳು ದಾಖಲಾಗುತ್ತಿವೆ. ಆದ್ದರಿಂದ ದುರುಪಯೋಗಕ್ಕೆ ಅವಕಾಶವಿಲ್ಲದ ಹಾಗೆ ಎಚ್ಚರ ವಹಿಸಿ ಈ ಕಾಯಿದೆಯನ್ನು ತಿದ್ದುಪಡಿ ಮಾಡಬೇಕಿದೆ ಎಂದು ಸದಸ್ಯರಾದ ನವೀನ ಕೆ.ಎಸ್., ಐವನ್ ಡಿ’ಸೋಜಾ, ರಮೇಶಬಾಬು ಹಾಗೂ ಇನ್ನೀತರರು ಸಲಹೆ ಮಾಡಿದರು.
ತಪ್ಪಿತಸ್ಥರನ್ನು ದಂಡದ ಮೂಲಕ ಶಿಕ್ಷೆಗೆ ಗುರಿಪಡಿಸುವುದು, ದಂಡದ ಮೊತ್ತ ಹೆಚ್ಚಳ ಮಾಡುವುದು ಕಾಯಿದೆಯ ತಿದ್ದುಪಡಿ ಹಿಂದಿನ ಉದ್ದೇಶವಾಗಿದೆ. ಮೂಲ ಕಾಯಿದೆಯಲ್ಲಿನ ಮಹತ್ವದ ಅಂಶಗಳನ್ನು ತಿದ್ದುಪಡಿ ಮಾಡಿಲ್ಲ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿ, ಮಸೂದೆಯ ಅಂಗೀಕಾರಕ್ಕೆ ಕೋರಿದರು.
ಸಭಾಪತಿಯವರು, ವಿಧೇಯಕವನ್ನು ಅಂಗೀಕರಿಸಲು ಧ್ವನಿಮತಕ್ಕೆ ಹಾಕಿದರು. ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.


