ಬೆಂಗಳೂರು: ನೌಕರರ ವೇತನ ಹೆಚ್ಚಳ ಸಾಗಾಣಿಕೆ ವೆಚ್ಚ ಮತ್ತು ಹಾಲು ಉತ್ಪಾದಕರಿಗೆ ನೀಡುತ್ತಿರುವ ಹೆಚ್ಚುವರಿ ದರಕ್ಕೆ ಅನುಗುಣವಾಗಿ ಹಾಲು ಮಾರಾಟ ದರ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಕೆಎಂಎಫ್ ಮಾಡಿರುವ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ.
ಪ್ರತಿ ಲೀಟರ್ ಹಾಲು, ಮಾರಾಟ ದರ 5 ರೂಪಾಯಿ ಹೆಚ್ಚಳ ಮಾಡುವಂತೆ ಕೋರಿ ಎಲ್ಲಾ ಹಾಲು ಒಕ್ಕೂಟಗಳು ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಶುಸಂಗೋಪನೆ ಸಚಿವ ಕೆ ವೆಂಕಟೇಶ್ ಅವರೊಂದಿಗೆ ಹಾಲು ಒಕ್ಕೂಟದ ಪದಾಧಿಕಾರಿಗಳು ಮತ್ತು ಅಧಿಕಾರಿಗಳ ಜೊತೆ ಸಭೆಯ ನಡೆಸಿದರು.
ಈ ಸಭೆಯಲ್ಲಿ ಹಾಲು ಒಕ್ಕೂಟಗಳು ಇರುವುದು ರೈತರಿಗೆ ಅನುಕೂಲ ಮಾಡುವುದಕ್ಕೆ ಮಾತ್ರ, ಲಾಭ ಮಾಡುವುದಕ್ಕಲ್ಲ ಎಂದು ಹೇಳಿದ ಅವರು ದರ ಏರಿಕೆಯ ಪ್ರಸ್ತಾಪದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಭೆಯಲ್ಲಿ ಹಾಲು ಒಕ್ಕೂಟಗಳ ಪ್ರತಿನಿಧಿಗಳು ಹೆಚ್ಚಳ ಮಾಡಲಾಗುವ ಐದು ರೂಗಲ್ಲಿ ಮೂರು ರೂಗಳನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಉಳಿದ 2 ರೂ. ಒಕ್ಕೂಟಗಳು ಉಳಿಸಿಕೊಳ್ಳಲಿವೆ ಎಂದು ಮನವರಿಕೆ ಮಾಡಿಕೊಟ್ಟಿದ್ದು ನಷ್ಟದಿಂದ ಒಕ್ಕೂಟಗಳು ಹೊರಬರಬೇಕಾದರೆ ದರ ಹೆಚ್ಚಳ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ
ಆದರೆ,ಒಕ್ಕೂಟಗಳ ದರ ಏರಿಕೆಯ ಒತ್ತಡಕ್ಕೆ ಮಣಿಯದ ಸಿಎಂಹೆಚ್ಚಳದ ಹಣ ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲೇಬೇಕು ಎನ್ನುವ ನಿಲುವಿಗೆ ಅಂಟಿಕೊಂಡರು. ಹೀಗಾಗಿ ದರ ಹೆಚ್ಚಳದ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದ ಸಭೆ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಬಳಿಕ ದರ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ.
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲು ಒಕ್ಕೂಟಗಳು ಖರ್ಚು ವೆಚ್ಚ ಕಡಿಮೆ ಮಾಡಬೇಕು. ಪಾರದರ್ಶಕತೆಯನ್ನು ಪಾಲಿಸಬೇಕು. ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಾರದು. ಇದರಿಂದಾಗಿಯೇ ವೆಚ್ಚ ಹೆಚ್ಚಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು
ಆಡಳಿತಾತ್ಮಕ ವೆಚ್ಚ ಯಾವುದೇ ಕಾರಣಕ್ಕೂ ಶೇ.2ಕ್ಕಿಂತ ಹೆಚ್ಚಾಗಬಾರದು ಎಂದು ಸಲಹೆ ಮಾಡಿದ ಅವರು ಮುಂದಿನ ಮೂರು ತಿಂಗಳಲ್ಲಿ ಆಡಳಿತಾತ್ಮಕ ವೆಚ್ಚ 2.5% ಕಡ್ಡಾಯವಾಗಿ ಇಳಿಸಬೇಕು. ಮುಂದಿನ 3 ತಿಂಗಳ ಒಳಗಾಗಿ ಎಲ್ಲಾ ಒಕ್ಕೂಟಗಳು ಆಡಳಿತಾತ್ಮಕ ವೆಚ್ಚ ಶೇ.2ಕ್ಕಿಂತ ಕೆಳಗೆ ಇಳಿಸಲೇಬೇಕು ಎಂದು ತಾಕೀತು ಮಾಡಿದರು
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಿದೆ. ಹಾಲಿನ ದರ ಹೆಚ್ಚಳ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಇದರ ಲಾಭ ಪೂರ್ಣವಾಗಿ ರೈತರಿಗೆ ತಲುಪಬೇಕು ಎಂಬುವುದು ಸರ್ಕಾರದ ನಿಲುವು ಎಂದು ಹೇಳಿದರು.


