ಸೋಮವಾರದಿಂದಲೇ ʻಗೃಹಲಕ್ಷ್ಮಿʼಯರ ಖಾತೆಗಳಿಗೆ 1 ಕಂತಿನ ಹಣ ಬಿಡುಗಡೆ ಮಾಡುವುದಾಗಿ ಮಹಿಳೆ ಮತ್ತು ಮಕ್ಕಳ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಈ ಮೂಲಕ ಹೊಸ ವರ್ಷಕ್ಕೂ ಮುನ್ನವೇ ಮನೆ ಯಜಮಾನಿಯರಿಗೆ ಸಿಹಿಸುದ್ದಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವಾಗಲೂ ಕಂತು ಅಂತ ಹೇಳ್ತೀನಿ. ತಿಂಗಳ ಹೆಸರು ಹೇಳಲ್ಲ. ಈಗಾಗಲೇ ಆರ್ಥಿಕ ಇಲಾಖೆ ನಮಗೆ 2೩ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಸೋಮವಾರದಿಂದ (ಡಿ.22) ಮುಂದಿನ ಶನಿವಾರದ ಒಳಗೆ 24ನೇ ಕಂತಿನ ಹಣ ಬಿಡುಗಡೆ ಆಗಲಿದೆ ಎಂದರು.
ರಾಜ್ಯದ 1.26 ಕೋಟಿ ಗೃಹಲಕ್ಷ್ಮಿಯರ ಖಾತೆಗೆ ಸೋಮವಾರದಿಂದ 24ನೇ ಕಂತಿನ ಹಣ ಬಿಡುಗಡೆ ಆಗಲಿದೆ ಎಂದಿರುವ ಸಚಿವರು, ಫೆಬ್ರವರಿ, ಮಾರ್ಚ್ ತಿಂಗಳ ಹಣ ಬಿಡುಗಡೆ ಮಾಡುವ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಸದನದಲ್ಲಿ ಕ್ಷಮೆಯಾಚಿಸಿದ್ದರು. ಈ ಬಗ್ಗೆ ಈಚೆಗೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಸಚಿವರ ಮೇಲೆ ಗರಂ ಆಗಿದ್ದರು. ಕೂಡಲೇ ಫೆಬ್ರವರಿ, ಮಾರ್ಚ್ ಕಂತಿನ ಬಾಕಿ ಹಣ ಬಿಡುಗಡೆಗೆ ಸೂಚಿಸಿದ್ದರು. ಆದರೆ 2 ತಿಂಗಳ ಹಣದ ಬಗ್ಗೆ ಸ್ಪಷ್ಟನೆ ನೀಡದ ಸಚಿವರು, 24ನೇ ಕಂತಿನ ಹಣ ಬಿಡುಗಡೆ ಸೋಮವಾರದಿಂದ ಆಗಲಿದೆ ಎಂದು ಹೇಳಿ ಜಾರಿಕೊಂಡಿದ್ದಾರೆ.
ಇದೇ ವೇಳೆ ಬಾಗಲಕೋಟೆಯಲ್ಲಿ ಬುದ್ದಿಮಾಂದ್ಯ ಮಕ್ಕಳ ಮೇಲೆ ಶಿಕ್ಷಕರು ನಡೆಸಿದ ದೌರ್ಜನ್ಯ ಕುರಿತು ಪ್ರತಿಕ್ರಿಯಿಸಿದ ಅವರು, ಮಾನವ ಸಮಾಜ ತಲೆ ತಗ್ಗಿಸುವಂತಹದ್ದಾಗಿದ್ದು, ಯಾವುದೇ ಕಾರಣಕ್ಕೂ ಇಂತಹ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ ಎಂದರು.
ಬುದ್ದಿಮಾಂದ್ಯ ಮಕ್ಕಳ ಮೇಲೆ ಹಲ್ಲೆ ನಡೆದ ಪ್ರಕರಣದ ಬೆನ್ನಲ್ಲೇ ಮಕ್ಕಳ ಹಕ್ಕು ರಕ್ಷಣೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು


