Wednesday, December 24, 2025
Google search engine
Homeರಾಜ್ಯ18,500 ಶಿಕ್ಷಕರ ನೇಮಕ ಪ್ರಕ್ರಿಯೆ ಶೀಘ್ರ ಪೂರ್ಣ: ಸಚಿವ ಮಧು ಬಂಗಾರಪ್ಪ

18,500 ಶಿಕ್ಷಕರ ನೇಮಕ ಪ್ರಕ್ರಿಯೆ ಶೀಘ್ರ ಪೂರ್ಣ: ಸಚಿವ ಮಧು ಬಂಗಾರಪ್ಪ

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ವರ್ಷ 18,500ಕ್ಕೂ ಅಧಿಕ ಶಿಕ್ಷಕರ ನೇಮಕ ಪ್ರಕ್ರಿಯೆ ಮುಂದಿನ ಶೈಕ್ಷಣಿಕ ವರ್ಷಾರಂಭದೊಳಗೆ ಪೂರ್ಣಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಶಾಲೆಗಳಿಗೆ 13 ಸಾವಿರ, ಅನುದಾನಿತ ಶಾಲೆಗಳಿಗೆ ಸುಮಾರು 5800 ಶಿಕ್ಷಕರ ನೇಮಕ ನಡೆಯಲಿದೆ ಎಂದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 4,700 ಶಿಕ್ಷಕರ ನೇಮಕ ಮಾತ್ರ ಆಗಿತ್ತು. ನಾನು ಶಿಕ್ಷಣ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಈಗಾಗಲೇ 13,000 ಶಿಕ್ಷಕರ ನೇಮಕ ನಡೆದಿದೆ. ಮತ್ತೆ 18,500ಕ್ಕೂ ಅಧಿಕ ಶಿಕ್ಷಕರ ನೇಮಕ ನಡೆಯಲಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನು ಬಿಜೆಪಿಯವರು ವಿರೋಧಿಸಿದ್ದರೂ ಮೋದಿ ಕೂಡ ಈ ಗ್ಯಾರಂಟಿಗಳನ್ನು ನಕಲು ಮಾಡಿದ್ದರಿಂದ ಸುಮ್ಮನಾಗಿದ್ದಾರೆ. ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಸಮೀಕ್ಷೆ ಮಾಡುತ್ತೇವೆ ಎಂದಾಗ ಸಮೀಕ್ಷೆಗೆ ಸಹಕರಿಸದಂತೆ ಬಿಜೆಪಿ ನಾಯಕರು ವಿರೋಧಿಸಿದರು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ನಡೆಸುವ ಜಾತಿ ಗಣತಿಯನ್ನೂ ವಿರೋಧಿಸುತ್ತಾರಾ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು.

ದಸರಾ ರಜೆ ಮುಗಿದು ಶಾಲೆಗಳು ಅ.8ರಿಂದ ಪುನಾರಂಭಗೊಳ್ಳಲಿವೆ ಎಂದ ಸಚಿವರು, ಸಮೀಕ್ಷೆ ಕಾರ್ಯ ಎಷ್ಟು ಪೂರ್ತಿಯಾಗಿದೆ ಎಂಬುದನ್ನು ನೋಡಿಕೊಂಡು ಆಯೋಗವು ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ. ಮಕ್ಕಳ ಪಾಠ- ಚಟುವಟಿಕೆಗಳಿಗೆ ತೊಂದರೆ ಆಗದಂತೆ ಯಾವ ರೀತಿ ಶಿಕ್ಷಕರನ್ನು ಸಮೀಕ್ಷೆಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಇಲಾಖೆ ನಿರ್ಧರಿಸಲಿದೆ. ಶಿಕ್ಷಕರ ಸಂಘದ ಜತೆ ಮಾತುಕತೆ ನಡೆಸಿ ಮುಂದುವರಿಯಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಭಾನುವಾರದವರಗೆ ಒಟ್ಟು ಶೇ.71.5ರಷ್ಟು ಸಮೀಕ್ಷೆ ನಡೆದಿದೆ. ಬಿಜೆಪಿ ಎಷ್ಟೇ ವಿರೋಧ ಮಾಡಿದರೂ ಜನರು ಸರ್ಕಾರದ ಜತೆ ಸ್ಪಂದಿಸಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments