ಮೈಸೂರು ಸೀರೆ ಧರಿಸಿ, ಮೈಸೂರು ಮಲ್ಲಿಗೆ ಮುಡಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ವಿಶ್ವವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿದರು.
ಸೋಮವಾರ ಬೆಳಿಗ್ಗೆ ಮಹರಾಜರ ಅಂಗರಕ್ಷಕ ಅವರ ಸೊಸೆ ಆಗಿರುವ ಬಾನು ಮುಷ್ತಾಕ್ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮಂಗಳವಾರತಿ ಸ್ವೀಕರಿಸಿದರು.
ಹಸಿರು ಬಾರ್ಡರ್ ಇರುವ ಹಳದಿ ಮೈಸೂರು ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ ಮುಡಿದು ಸಿಎಂ ಸಿದ್ದರಾಮಯ್ಯ, ಸಚಿವರ ಜೊತೆ ಆಗಮಿಸಿದ ಬಾನು ಮುಷ್ತಾಕ್ ದೇವಸ್ಥಾನಕ್ಕೆ ಆಗಮಿಸಿ ಗರ್ಭಗುಡಿ ಮುಂಭಾಗದ ಆವರಣದಲ್ಲಿ ನಿಂತು ತಾಯಿ ಚಾಮುಂಡಿ ದರ್ಶನ ಪಡೆದರು. ನಂತರ ಗಣಪತಿಗೆ ಕೈ ಮುಗಿದು, ಮಂಗಳಾರತಿ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಬಾನು ಮುಷ್ತಾಕ್ ಇಡೀ ಕುಟುಂಬವೇ ಹಾಜರಾಗಿತ್ತು. ಖಾಸಗಿ ಹೋಟೆಲಿನಿಂದ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಬಾನು ಮುಷ್ತಾಕ್ ಆಗಮಿಸಿದರೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರ ತಂಡ ಐರಾವತ ಬಸ್ಸಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿತು.
ಜಾನಪತ ಕಲಾತಂಡಗಳು ಗಣ್ಯರನ್ನು ಸ್ವಾಗತ ಮಾಡಿದವು. ನಂತರ ಜಾನಪದ ಕಲಾ ತಂಡಗಳ ಜೊತೆ ಮಹಿಷಾಸುರ ಪ್ರತಿಮೆಯಿಂದ ಬಾನು ಮುಷ್ತಾಕ್, ಸಿಎಂ ಸಿದ್ದರಾಮಯ್ಯ, ಸಚಿವರು ಚಾಮುಂಡಿ ದೇವಸ್ಥಾನದ ಒಳಗಡೆ ಪ್ರವೇಶಿಸಿ ಪೂಜೆಯಲ್ಲಿ ಭಾಗಿಯಾದರು.
ಚಾಮಂಡಿಬೆಟ್ಟದಲ್ಲಿ ದೀಪ ಬೆಳಗಿಸಿ ಮೈಸೂರು ದಸರಾಗೆ ಚಾಲನೆ ನೀಡಿದ ನಂತರ ಮಾತನಾಡಿದ ಬಾನು ಮುಷ್ತಾಕ್, ನನ್ನ ಆಪ್ತ ಗೆಳತಿ ಬೂಕರ್ ಪ್ರಶಸ್ತಿ ಸಿಗಲೆಂದು ಚಾಮುಂಡಿ ತಾಯಿಯ ಬಳಿ ಹರಕೆ ಹೊತ್ತಿದ್ದಳು. ಈ ವಿಶಿಷ್ಟ ಸನ್ನಿವೇಶದಲ್ಲಿ ಹರಕೆ ಈಡೇರಿದೆ. ತಾಯಿ ಚಾಮುಂಡಿ ನನ್ನನ್ನು ಈ ವಿಶೇಷ ಸಂದರ್ಭದಲ್ಲಿ ಕರೆಸಿಕೊಂಡಿದ್ದಾಳೆ. ವೇದಿಕೆ ಮೇಲೆ ನಿಮ್ಮೆದುರು ನಿಲ್ಲುತ್ತಿರುವುದು ನನ್ನ ಜೀವನದ ಅತ್ಯಂತ ಗೌರವದ ಕ್ಷಣ ಎಂದು ಭಾವುಕರಾದರು.

ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಈ ನಾಡಿನ ನಾಡಿ ಮಿಡಿತ, ಸ್ಪಂದನೆಯಿದೆ. ವಿಭಿನ್ನತೆಯಲ್ಲಿ ಏಕತೆ ಇರುವ ಹಬ್ಬವಿದು. ಮೈಸೂರಿನ ಉರ್ದು ಭಾಷಿಕರು ನವರಾತ್ರಿ ಪ್ರತಿ ದಿನಕ್ಕೂ ಒಂದೊಂದು ಹೆಸರು ಇಟ್ಟು ಕೊಂಡಿದ್ದಾರೆ. ಸಿಲ್ಹಿಂಗನ್ ಎಂದು ದಸರಾಕ್ಕೆ ಉರ್ದು ವಿನಲ್ಲಿ ಹೆಸರಿಟ್ಟುಕೊಂಡಿದ್ದಾರೆ. ಇದು ಎಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಉತ್ಸವ ಎಂದು ಅವರು ಬಣ್ಣಿಸಿದರು.
ನನ್ನ ಮಾವ ಮೈಸೂರು ಮಹಾರಾಜರ ಅಂಗರಕ್ಷಕರಾಗಿದ್ದರು. ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಮರನ್ನು ನಂಬಿದ್ದರು. ತಮ್ಮ ರಕ್ಷಕರನ್ನಾಗಿ ಮಾಡಿಕೊಂಡಿದ್ದರು. ಮುಸ್ಲಿಮರನ್ನು ಅನುಮಾನದಿಂದ ನೋಡಿರಲಿಲ್ಲ ಎಂದು ಅವರು ಪರೋಕ್ಷವಾಗಿ ದಸರಾ ಉದ್ಘಾಟನೆಗೆ ವಿರೋಧಿಸಿದವರಿಗೆ ತಿರುಗೇಟು ನೀಡಿದರು.
ಎಲ್ಲರನ್ನೂ ಒಳಗೊಳ್ಳುವ ಮನಸ್ಸು ನನ್ನದು. ಈ ನೆಲದಲ್ಲಿ ಮಾನವೀಯ ತುಡಿತ ಇದೆ. ತಾಯಿ ಚಾಮುಂಡಿ ನಮ್ಮಲ್ಲಿನ ದ್ವೇಷ, ಅಸಹಿಷ್ಣುತೆ ನಿವಾರಣೆ ಮಾಡಲಿ. ನನ್ನ ಧಾರ್ಮಿಕ ನಂಬಿಕೆಗಳ ಜೀವಪರವಾಗಿವೆ. ನಾವು ಅಸ್ತ್ರಗಳಿಂದ , ಹಗೆಗಳಿಂದ ಬದುಕವನ್ನು ಗೆಲ್ಲಲು ಸಾಧ್ಯವಿಲ್ಲ. ಅಕ್ಷರಗಳಿಂದ, ಪ್ರೀತಿಯಿಂದ ಬದುಕನ್ನು ಗೆಲ್ಲಬಹುದು ಎಂದು ಹೇಳುವ ಮೂಲಕ ತನ್ನನ್ನು ವಿರೋಧಿಸಿದವರಿಗೆ ಭಾವನಾತ್ಮಕ ತಿರುಗೇಟು ನೀಡಿದರು.
ಮೈಸೂರು ಸರ್ವ ಜನಾಂಗದ ಶಾಂತಿಯ ತೋಟ: ಬಾನು ಮುಷ್ತಾಕ್
ಮೈಸೂರು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು ನಾವು ಪರಸ್ಪರ ನಮ್ಮನ್ನು ನಾವು ಗೌರವಿಸಿಕೊಳ್ಳೋಣ. ಪ್ರತಿ ಹೂ ತನ್ನ ಬಣ್ಣದಲ್ಲಿ ಹಾಡಲಿ, ತನ್ನ ರಾಗದಲ್ಲೇ ಹಕ್ಕಿ ಕೂಗಲಿ. ಎಲ್ಲರೂ ಒಟ್ಟಾಗಿ ಸೇರಿ ಸೌಹಾರ್ದಯುತವಾಗಿ ನಡೆದುಕೊಳ್ಳೋಣ.ನಾವು ಎಲ್ಲರೂ ಒಂದೇ ಗಗನದ ಪಯಣಿಗರು.ಆಕಾಶ, ಭೂಮಿ ಯಾವತ್ತೂ ಯಾರನ್ನು ಬೇರೆ ಮಾಡುವುದಿಲ್ಲ.ನಾವು ಮನುಷ್ಯರು ಮಾತ್ರ ಗಡಿಗಳನ್ನು ಕಟ್ಟಿ ಕೊಂಡಿದ್ದೇವೆ. ನಾವು ಈ ಗಡಿಗಳನ್ನು ತೊಡೆದು ಹಾಕೋಣ ಎಂದು ಕರೆ ನೀಡಿದರು.
ತಾಯಿ ಚಾಮುಂಡಿ ರಕ್ಷಕತ್ವದ ಸಂಕೇತ.ನಮ್ಮಲ್ಲರ ಒಳಗಿನ ದ್ವೇಷ, ಹಗೆಯನ್ನು ಚಾಮುಂಡಿ ನಾಶಮಾಡಲಿ. ಜಗತ್ತಿನಾದ್ಯಂತ ಶಾಂತಿ, ಸಹನುಭೂತಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸಿದರು. ಸಹಸ್ರ ಆರೋಪಗಳ ನಡುವೆ ನಾನು ಒಂಟಿಯಾಗಿ ಧೈರ್ಯವಾಗಿ ನಿಂತಿದ್ದೇನೆ ಎಂದು ಕವನ ಓದುತ್ತಲೇ ವಿವರಣೆ ನೀಡಿದ ಅವರು ಪ್ರೀತಿಯ ಹೊಸ ಸಮಾಜ ಕಟ್ಟೋಣ ಎಂದು ಹೇಳಿದರು.
ನಾನು ನೂರಾರು ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿದ್ದೇನೆ. ಮಂಗಳಾರತಿಯನ್ನೂ ನೂರಾರು ಬಾರಿ ಸ್ವೀಕರಿಸಿದ್ದೇನೆ. ನನ್ನ ಮತ್ತು ಹಿಂದೂ ಧರ್ಮದ ಬಾಂಧವ್ಯ ಹೇಗಿದೆ ಎಂದು ನನ್ನ ಆತ್ಮಕಥೆ ಯಲ್ಲಿ ಬರೆದಿದ್ದೇನೆ. ಈ ಪುಸ್ತಕ ನಾಳೆ ಬಿಡುಗಡೆಯಾಗಲಿದೆ. ಎಷ್ಟೇ ಸವಾಲು ಬಂದರೂ ದಿಟ್ಟವಾಗಿ ನಿಂತು ನನಗೆ ನೈತಿಕ ಬೆಂಬಲ ನೀಡಿದ ಸಿಎಂ ಸಿದ್ದರಾಮಯ್ಯನವರಿಗೆ ಧನ್ಯವಾದಗಳು ಎಂದು ಹೇಳಿದರು.


