ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಶೋಧ ಕಾರ್ಯ ನಡೆಸುತ್ತಿರುವ ಎಸ್ ಐಟಿಗೆ ಮಂಗಳವಾರ ದೂರುದಾರ ತೋರಿಸಿದ 11ಮತ್ತು 12ನೇ ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ.
ವಿಶೇಷ ತನಿಖಾ ತಂಡ (SIT) ಸೋಮವಾರ ಪಾಯಿಂಟ್ ಸಂಖ್ಯೆ 11 ಮತ್ತು 12ರಲ್ಲಿ ಉತ್ಕನನ ನಡೆಸಬೇಕಿತ್ತು. ಆದರೆ ದೂರುದಾರ ಅರಣ್ಯದ ಕಡೆ ಕರೆದುಕೊಂಡು ಹೋಗಿದ್ದರಿಂದ ಮಂಗಳವಾರ 11 ಮತ್ತು 12ನೇ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿತು.
ಏಕಾಏಕಿ ಅರಣ್ಯದಲ್ಲಿ ಗುರುತು ಮಾಡದ ಜಾಗದಲ್ಲಿ ಶೋಧ ನಡೆಸಿದ್ದರಿಂದ ಪುರುಷನ ಕಳೇಬರ ಹಾಗೂ ಕೆಲವು ವಸ್ತುಗಳು ಪತ್ತೆಯಾಗಿದ್ದವು. ಮಂಗಳವಾರ 11 ಮತ್ತು 12ನೇ ಸ್ಥಳದಲ್ಲಿ ಉತ್ಕನನ ನಡೆದಿದ್ದು 6 ಅಡಿ ಆಳ ತೋಡಿದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.
ಇಲ್ಲಿಯವರೆಗೆ ದೂರುದಾರ ಗುರುತಿಸಿದ್ದ 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರ ಸಿಕ್ಕಿತ್ತು. ತನ್ನ ದೂರಿನಲ್ಲಿ ದೂರುದಾರ 13 ಜಾಗಗಳಲ್ಲಿ ಹೆಣವನ್ನು ಹೂತಿದ್ದೇನೆ ಎಂದು ತಿಳಿಸಿದ್ದ. ಇದೀಗ ಗುರುತು ಮಾಡಿದ 13ನೇ ಹಾಗೂ ಅಂತಿಮ ಸ್ಥಳದಲ್ಲಿ ಬುಧವಾರ ಶೋಧ ಕಾರ್ಯ ನಡೆಯಲಿದೆ. 13ನೇ ಜಾಗದಲ್ಲಿ ಏನಾದರೂ ಸಿಗುವುದೇ ಎಂಬ ಕುತೂಹಲ ಮೂಡಿದೆ.
140 ಮೂಳೆಗಳ ಪರಿಶೀಲನೆಯಲ್ಲಿ ಎಫ್ ಎಸ್ ಎಲ್ ತಂಡ
ಇದುವರೆಗೆ ಎಸ್ ಐಟಿ ಶೋಧ ಕಾರ್ಯದ ವೇಳೆ ತಲೆಬುರುಡೆ ಸೇರಿದಂತೆ 140 ಮೂಳೆ ಚೂರುಗಳು ಪತ್ತೆಯಾಗಿದ್ದು, ಇವುಗಳನ್ನು ಮಣಿಪಾಲದ ಕೆಎಂಎಫ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಎಫ್ ಎಸ್ ಎಲ್ ತಜ್ಞರ ತಂಡ ಸಂಶೋಧನೆ ನಡೆಸಿದ್ದು, ವರದಿ ನಿರೀಕ್ಷಿಸಲಾಗಿದೆ.


