ಕನ್ನಡದ ಹಿರಿಯ ಸಾಹಿತಿ ಪದ್ಮಭೂಷಣ ಡಾ.ಎಸ್.ಎಲ್. ಭೈರಪ್ಪ ಅವರ ಅಂತ್ಯಕ್ರಿಯೆ ಶುಕ್ರವಾರ ಮೈಸೂರಿನ ಚಾಮುಂಡಿ ತಪ್ಪಲಿನಲ್ಲಿ ನೆರವೇರಿತು.
ಎರಡು ದಿನಗಳ ಹಿಂದೆ ಅನಾರೋಗ್ಯದ ಕಾರಣ ಬೆಂಗಳೂರಿನಲ್ಲಿ ನಿಧನರಾಗಿದ್ದ ಎಸ್.ಎಲ್. ಭೈರಪ್ಪ ಅವರ ಪಾರ್ಥಿವ ಶರೀರವನ್ನು ಗುರುವಾರ ಮೈಸೂರಿಗೆ ಕರೆತರಲಾಗಿತ್ತು. ಶುಕ್ರವಾರ ಬೆಳಿಗ್ಗೆ ಬ್ರಾಹ್ಮಣ ಸಂಪ್ರದಾಯದಂತೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಮೈಸೂರಿನ ಚಾಮುಂಡಿ ತಪ್ಪಲಲ್ಲಿರುವ ಚಿತಾಗಾರಾದಲ್ಲಿ ಭೈರಪ್ಪ ಅವರ ಅಂತ್ಯ ಸಂಸ್ಕಾರ ನೆರವೇರಿತು. ಈ ಸಂದರ್ಭದಲ್ಲಿ ಮೂರು ಕುಶಾಲ ತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಪುತ್ರರಾದ ರವಿಶಂಕರ್, ಉದಯಶಂಕರ್ ಅಂತ್ಯ ಸಂಸ್ಕಾರದ ವಿಧಿ ವಿಧಾನ ಪೂರೈಸಿದರು. ಜೊತೆಗೆ ಸಹನಾ ವಿಜಯ್‌ಕುಮಾರ್ ಭೈರಪ್ಪ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಭೈರಪ್ಪ ಅವರು ಬುಧವಾರ (ಸೆಪ್ಟೆಂಬರ್ 25) ಹೃದಯಾಘಾತದಿಂದ 94ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಮಕ್ಕಳಾದ ಉದಯಶಂಕರ್ ಹಾಗೂ ರವಿಶಂಕರ್ ಯಾವುದೇ ಕಾರಣಕ್ಕೂ ತಮ್ಮ ಅಂತ್ಯಕ್ರಿಯೆ ನೆರವೇರಿಸುವಂತಿಲ್ಲ ಎಂದು ಭೈರಪ್ಪ ಅವರು ವಿಲ್ ಬರೆಸಿದ್ದಾರೆ ಎನ್ನಲಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅಂತ್ಯಕ್ರಿಯೆಯನ್ನು ಮಕ್ಕಳಾದ ಉದಯಶಂಕರ್ ಮತ್ತು ರವಿಶಂಕರ್ ನೆರವೇರಿಸಬಾರದು, ಬದಲಾಗಿ ಬದುಕಿನ ಕೊನೆಯ ದಿನಗಳಲ್ಲಿ ಅವರನ್ನು ನೋಡಿಕೊಂಡಿದ್ದ ಹೆಣ್ಣುಮಗಳೇ ಅಂತಿಮ ಸಂಸ್ಕಾರ ನೆರವೇರಿಸಬೇಕು ಎಂಬುದು ಭೈರಪ್ಪನವರ ಆಶಯ ಎಂದು ಅವರ ಅಭಿಮಾನಿ ಫಣೀಶ್ ಮೈಸೂರಿನಲ್ಲಿ ವಾದಿಸಿ ವಿಲ್ ಪ್ರತಿ ತೋರಿಸಿದ್ದರು.


