Thursday, December 25, 2025
Google search engine
Homeರಾಜ್ಯನೆರೆಹೊರೆ ರಾಜ್ಯಗಳಿಗೆ ಹೋಲಿಸಿದರೆ ಮುದ್ರಾಂಕ ಶುಲ್ಕ ಕರ್ನಾಟಕದಲ್ಲೇ ಕಡಿಮೆ: ಆಯುಕ್ತ ಮುಲೈ ಮುಗಿಲನ್ ಸಮರ್ಥನೆ

ನೆರೆಹೊರೆ ರಾಜ್ಯಗಳಿಗೆ ಹೋಲಿಸಿದರೆ ಮುದ್ರಾಂಕ ಶುಲ್ಕ ಕರ್ನಾಟಕದಲ್ಲೇ ಕಡಿಮೆ: ಆಯುಕ್ತ ಮುಲೈ ಮುಗಿಲನ್ ಸಮರ್ಥನೆ

ಬೆಂಗಳೂರು: ಆಗಸ್ಟ್ 31ರಿಂದ ಜಾರಿಗೊಳಿಸುತ್ತಿರುವ ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಪರಿಷ್ಕೃತ ಶುಲ್ಕ ನೆರೆಹೊರೆಯ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ ಎಂದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಯುಕ್ತ ಮುಲೈ ಮುಗಿಲನ್ ಸಮರ್ಥಿಸಿಕೊಂಡಿದ್ದಾರೆ.

ಆಗಸ್ಟ್ 31ರಿಂದ ನೋಂದಣಿ ಮತ್ತು ಮುದ್ರಾಂಕ ಪರಿಷ್ಕೃತ ಶುಲ್ಕ ಜಾರಿಗೆ ಬರುತ್ತಿದ್ದು ಪ್ರತಿಪಕ್ಷಗಳ ಆರೋಪಗಳ ಹಿನ್ನೆಲೆಯಲ್ಲಿ ಶನಿವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ನಾಳೆಯಿಂದ ಜಾರಿಗೆ ಬರಲಾಗುತ್ತಿರುವ ಪರಿಷ್ಕೃತ ಶುಲ್ಕವನ್ನು ಇತರೆ ರಾಜ್ಯಗಳ ಶುಲ್ಕಗಳೊಂದಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ ಎಂದಿದ್ದಾರೆ.

ಮುದ್ರಾಂಕ, ನೋಂದಣಿ ಹಾಗೂ ಇತರೆ ಸೆಸ್ ಸೇರಿ ರಾಜ್ಯದಲ್ಲಿ ಪರಿಷ್ಕೃತ ಶುಲ್ಕ ಶೇ.6.6ರಷ್ಟು  ಆಗಲಿದೆ. ಆದರೆ ತಮಿಳುನಾಡಿನಲ್ಲಿ ಶೇ.9, ಕೇರಳದಲ್ಲಿ ಶೇ.10, ಆಂಧ್ರಪ್ರದೇಶದಲ್ಲಿ ಶೇ. 7.5, ತೆಲಂಗಾಣದಲ್ಲಿ ಶೇ.7.5ರಷ್ಟು ಶುಲ್ಕ ಜಾರಿಯಲ್ಲಿವೆ ಎಂದು ಅವರು ವಿವರಿಸಿದ್ದಾರೆ.

ದಸ್ತಾವೇಜುಗಳ ಮೇಲಿನ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ಇತರೆ ರಾಜ್ಯಗಳೊಂದಿಗೆ ಸಮೀಕರಿಸಿಗೊಳ್ಳಲು (Rationalisation) ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸಲು ಮತ್ತು ನಾಗರಿಕರಿಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆಯನ್ನು ನೀಡಲು ಸರ್ಕಾರವು ಆಗಸ್ಟ್ 31, 2025 ರಿಂದ ಜಾರಿಗೆ ಬರುವಂತೆ ನೋಂದಣಿ ಶುಲ್ಕವನ್ನು ಶೇಕಡ 1 ರಿಂದ  ಶೇ.2 ರಷ್ಟು ಪರಿಷ್ಕರಿಸಿದೆ ಎಂದರು.

ಹಿಂದೆ ಮುಂದ್ರಾಕ ಶುಲ್ಕ 1 ಲಕ್ಷ ರೂ.ಗೆ 1 ಸಾವಿರ ರೂ. ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಪರಿಷ್ಕೃತ ಶುಲ್ಕದ ಪ್ರಕಾರ 1 ಲಕ್ಷ ರೂ. ನೋಂದಣಿಗೆ 2 ಸಾವಿರ ರೂ. ಶುಲ್ಕ ವಿಧಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಪರಿಷ್ಕೃತ ನೋಂದಣಿ ಶುಲ್ಕವನ್ನು ಸುಗಮವಾಗಿ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಪಾವತಿಸಲು ಹಿಂದಿನ ನೋಂದಣಿ ಶುಲ್ಕವನ್ನು ಪಾವತಿಸಿ ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಅಪಾಯಿಂಟ್‌ಮೆಂಟ್ ಪಡೆದಿರುವವರು ಅಥವಾ ಶುಲ್ಕವನ್ನು ಪಾವತಿಸಿ ಅಪಾಯಿಂಟ್‌ಮೆಂಟ್ ಪಡೆಯದಿರುವವರು, ವ್ಯತ್ಯಾಸದ ಮೊತ್ತವನ್ನು ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಪಾವತಿಸಬೇಕು. ಮೊದಲು ಬಳಸಿದ ಲಾಗಿನ್ ಮೂಲಕವೇ ಈ ಪಾವತಿಯನ್ನು ಮಾಡಬೇಕು. ಅರ್ಜಿದಾರರಿಗೆ ನೆರವಾಗುವ ದೃಷ್ಟಿಯಿಂದ ಅಗತ್ಯ ಸೂಚನೆಗಳನ್ನು ಒಳಗೊಂಡ ಎಸ್‌ಎಂಎಸ್‌ ನೇರವಾಗಿ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು.

ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಸಲ್ಲಿಸಲಾಗಿರುವ ಹಾಗೂ ಪರಿಶೀಲನೆಯಲ್ಲಿರುವ ದಸ್ತಾವೇಜುಗಳಿಗೆ ನೋಂದಣಿ ಶುಲ್ಕವನ್ನು ಮರು ಲೆಕ್ಕ ಹಾಕಲಾಗುವುದು ಮತ್ತು ಪರಿಷ್ಕೃತ ಶೇಕಡ 2  ರಂತೆ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ವರ್ಗದ ಅರ್ಜಿದಾರರಿಗೆ ಪಾವತಿಯ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲು ಪರಿಷ್ಕೃತ ನೋಂದಣಿ ಶುಲ್ಕದ ವಿವರವನ್ನು ತಿಳಿಸಲಾಗುವುದು. ಇಲಾಖೆಯು ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಎಲ್ಲಾ ಅರ್ಜಿದಾರರಿಗೆ ಮೇಲ್ಕಾಣಿಸಿದ ನವೀಕರಿಸಿದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಂತ ಹಂತವಾಗಿ ಅನುಸರಿಸಬಹುದಾದ ವಿವರವಾದ ಸೂಚನೆಗಳನ್ನು ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments