ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದಲೇ ಯೂಟ್ಯೂಬ್ ಚಾನಲ್ ಆರಂಭಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದ ತಮ್ಮ ಕಚೇರಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಾಪರ್ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ತಯಾರಿ ನಡೆಸಿದರು, ಅವರ ಸಲಹೆಗಳು ಮತ್ತು ಟಾಪ್ ಶಿಕ್ಷಕರಿಂದ ಪಾಠ ಮಾಡಿಸಿ ಆ ವಿಡಿಯೋಗಳನ್ನು ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದರು.
ಸರ್ಕಾರಿ ಶಾಲೆಗಳಿಗೂ ಖಾಸಗಿ ಶಾಲೆಗಳಿಗೂ ಹೋಲಿಕೆ ಮಾಡಲು ಆಗಲ್ಲ. ಅನುದಾನಿತ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಿಗೆ ಉತ್ತಮ ಫಲಿತಾಂಶ ಬಂದಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಎಲ್ಕೆಜಿಗೆ ಒಂದು ವಿಭಾಗ, ಒಂದನೇ ತರಗತಿಯಿಂದ ಐದನೇ ತರಗತಿಗೆ, ಆರನೇ ತರಗತಿಯಿಂದ ಏಳನೇ ತರಗತಿ, ಎಂಟನೇ ತರಗತಿಯಿಂದ 10ನೇ ತರಗತಿ ವರೆಗೆ ವಿಭಾಗ ಮಾಡಿದ್ದೇವೆ. ವಿದ್ಯಾರ್ಥಿಗಳು ಇಂಗ್ಲಿಷ್ ಮತ್ತು ಕನ್ನಡ ಮಾತನಾಡುವಾಗ ಕೆಲವು ಸಲ ತಪ್ಪಾಗಿ ಉಚ್ಚಾರಣೆ ಮಾಡುತ್ತಾರೆ. ಇದನ್ನು ಸರಿಪಡಿಸಲು ಎಐ ತಂತ್ರಜ್ಞಾನವನ್ನು ಶಾಲೆಗಳಲ್ಲಿ ಉಪಯೋಗಿಸಲಾಗುತ್ತದೆ ಎಂದರು.
ಜನ ಗಣತಿ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೂ ಕೇಂದ್ರ ಸರ್ಕಾರ ಜನ ಗಣತಿಗೆ 500 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಸರಿಯಲ್ಲ. ನಮ್ಮ ರಾಜ್ಯದಲ್ಲಿಯೇ 165 ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಿಂದ ಕೇಂದ್ರ ಸರ್ಕಾರ ಜನ ಗಣತಿಗೆ ಹೆಚ್ಚಿನ ಹಣ ಮೀಸಲಿಡಬೇಕಿದೆ. ಬಿಜೆಪಿಯವರು ನಮ್ಮ ಗ್ಯಾರಂಟಿಯನ್ನು ಕಾಪಿ ಮಾಡಿದ್ದಾರೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಎಲ್ಲರಿಗೂ ರಕ್ಷಣೆ ನೀಡಬೇಕು. ಗಾಂಧಿ ನೆಲೆಸಿದ್ದ ದೇಶದಲ್ಲಿ ಮೊದಲು ನೀವು ಶಾಂತಿಯನ್ನು ಹುಡುಕಬೇಕು. ಅನಿವಾರ್ಯವಾದರೆ ಇಂದಿರಾ ಗಾಂಧಿ ಅವರ ಥರ ಯುದ್ದ ಮಾಡಿ ಬುದ್ದಿ ಕಲಿಸಬೇಕು. ನಾವು ಏನಾದರೂ ಮಾತನಾಡಿದ್ರೆ ಬಿಜೆಪಿಯವರು ಪಾಕಿಸ್ತಾನಕ್ಕೆ ಹೋಗಿ ಅಂತಾರೆ, ಇದು ಸರಿಯಲ್ಲ. ದೇವಾಲಯಕ್ಕಿಂತ ಶಾಲೆಯಲ್ಲಿ ಸಮಯಕ್ಕೆ ಸರಿಯಾಗಿ ಘಂಟೆ ಹೊಡೆದರೆ ದೇಶ ಪ್ರಗತಿಯಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.


