Thursday, December 25, 2025
Google search engine
Homeರಾಜ್ಯಕೆಆರ್ ಎಸ್ ಡ್ಯಾಂಗೆ ಟಿಪ್ಪು ಅಡಿಗಲ್ಲು ಹಾಕಿದ್ದಕ್ಕೆ ಗೇಟ್ ಬಳಿ ಸಾಕ್ಷಿ ಇದೆ: ಪ್ರೊ.ಕೆಎಸ್ ಭಗವಾನ್

ಕೆಆರ್ ಎಸ್ ಡ್ಯಾಂಗೆ ಟಿಪ್ಪು ಅಡಿಗಲ್ಲು ಹಾಕಿದ್ದಕ್ಕೆ ಗೇಟ್ ಬಳಿ ಸಾಕ್ಷಿ ಇದೆ: ಪ್ರೊ.ಕೆಎಸ್ ಭಗವಾನ್

ಕೆಆರ್ ಎಸ್ ಜಲಾಶಯಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದಾರೆ ಎಂದು ಸಚಿವ ಎಚ್.ಸಿ. ಮಹದೇವಪ್ಪ ಅವರ ಹೇಳಿಕೆ ಸತ್ಯವಾಗಿದೆ. ಜಲಾಶಯದ ಗೇಟ್ ಬಳಿ ಹಾಕಿರುವ ಮೂರು ಕಲ್ಲುಗಳೇ ಇದಕ್ಕೆ ಸಾಕ್ಷಿ ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಎಚ್.ಸಿ.ಮಹದೇವಪ್ಪ ಟಿಪ್ಪು ಸುಲ್ತಾನ್ ಕೆಆರ್‌ಎಸ್ ಅಣೆಕಟ್ಟೆ ಕಟ್ಟಲು ಶಂಕುಸ್ಥಾಪನೆ ಮಾಡಿದ್ದಾರೆ ಎಂದು ಹೇಳಿದ್ದಾರೆ ಅಷ್ಟೇ. ಕನ್ನಂಬಾಡಿ ಕಟ್ಟೆಗೆ ಹೋಗಿ ನೋಡಿ ಗೇಟಿನ ಒಳ ಭಾಗದಲ್ಲಿ 3 ಕಲ್ಲುಗಳಿವೆ. ಒಂದು ಅರೇಬಿಕ್, ಒಂದು ಇಂಗ್ಲಿಷ್, ಒಂದು ಕನ್ನಡದಲ್ಲಿ ಇದೆ. ಅದರಲ್ಲಿ ಭಗವಂತನ ಕರುಣೆಯಿಂದ ಆಣೆಕಟ್ಟೆ ಕಟ್ಟಿಸಲು ಹೊರಟಿದ್ದೇನೆ, ಶಂಕುಸ್ಥಾಪನೆ ಮಾಡಿದ್ದೇನೆ ಎಂದು ಬರೆದಿದೆ ಎಂದರು.

ಇತಿಹಾಸವನ್ನು ಅರಿಯದೆ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವುದು ಅಪಾಯಕಾರಿ ಬೆಳವಣಿಗೆ. ಟಿಪ್ಪು ತನ್ನ ಆಡಳಿತದಲ್ಲಿ ಎಲ್ಲ ಸಮುದಾಯಗಳ ಪರವಾಗಿದ್ದರು. ಒಂದು ವೇಳೆ ಮತಾಂಧನಾಗಿದ್ದರೆ ಶ್ರೀರಂಗಪಟ್ಟಣದಲ್ಲಿ ಎಲ್ಲರೂ ಮುಸ್ಲಿಮರಾಗಿ ಪರಿವರ್ತನೆ ಆಗಿರಬೇಕಿತ್ತಲ್ಲವೇ ಎಂದು ಅವರು ಪ್ರಶ್ನಿಸಿದರು.

ಡಾ.ರಾಜ್‌ಕುವಾರ್ ಸಿನಿಮಾದ ಚಿತ್ರಗೀತೆಯೊಂದರಲ್ಲಿ ‘ಕಾವೇರಿಯನ್ನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ ಎಂದು ಹಾಡಿಸಿದ್ದಾರೆ. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುವ ಸಾಲುಗಳು. ಇದರಿಂದ ಕನ್ನಂಬಾಡಿ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅವಮಾನ ಮಾಡಿದಂತೆ. ಏಕೆಂದರೆ ಅಣೆಕಟ್ಟೆ ಕಟ್ಟುವಾಗ ವಿಶ್ವೇಶ್ವರಯ್ಯ 1 ವರ್ಷ ಮಾತ್ರ ಇದ್ದರು. ಕನ್ನಂಬಾಡಿ ಕಟ್ಟೆ ಕಟ್ಟಲು 21 ವರ್ಷಗಳು ಬೇಕಾಯಿತು ಎಂದು ವಿವರಿಸಿದರು.

1911ರಲ್ಲಿ ಗುದ್ದಲಿಪೂಜೆ ವೇಳೆ ಟಿಪ್ಪು ಅಡಿಗಲ್ಲು ಪತ್ತೆ!

ನಂತರ ಮಾತನಾಡಿದ ಮಾಜಿ ಮಹಾಪೌರ ಪುರುಷೋತ್ತಮ್, ಕೆಆರ್‌ಎಸ್ ಅಣೆಕಟ್ಟೆಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ ವಿಚಾರದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೀಡಿರುವ ಹೇಳಿಕೆ ಸತ್ಯಕ್ಕೆ ಹತ್ತಿರವಾಗಿದೆ. ಆದರೆ, ಹೇಳಿಕೆಯನ್ನು ತಿರುಚಿ ವಿವಾದ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಕೆಆರ್ ಎಸ್ ಅಣೆಕಟ್ಟೆಗೆ ಟಿಪ್ಪು ಅಡಿಗಲ್ಲು ಹಾಕಿದ್ದಾರೆ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಇದಕ್ಕೆ ಸಾಕ್ಷಿಯೂ ಇದೆ. ಹಾಗಾಗಿ ಎಲ್ಲರೂ ಇತಿಹಾಸದ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದರು.

ಕೆಆರ್‌ಎಸ್ ನಿರ್ಮಾತೃ ನಾಲ್ವಡಿಯವರೇ ಎಂಬುದರಲ್ಲಿ ಎರಡು ಮಾತಿಲ್ಲ. 1911ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆರ್‌ಎಸ್ ಅಣೆಕಟ್ಟೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡುವ ವೇಳೆ ಟಿಪ್ಪು ಸುಲ್ತಾನರು ಸ್ಥಾಪಿಸಿದ್ದ ಅಡಿಗಲ್ಲು ಸಿಕ್ಕಿದೆ. ಅದನ್ನು ಕೂಡ ಅಣೆಕಟ್ಟೆ ಬಳಿ ಸ್ಥಾಪನೆ ಮಾಡಿದ್ದಾರೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅತೀ ಹೆಚ್ಚು ಗೌರವ ಕೊಡುವುದು ದಲಿತ ಸಮುದಾಯ. ಮಹದೇವಪ್ಪ ನಾಲ್ವಡಿ ವಿರುದ್ಧ, ರಾಜಮನೆತನದವರ ವಿರುದ್ಧ ಮಾತನಾಡಿಲ್ಲ. ಹೀಗಾಗಿ ಮುಸ್ಲಿಂ ಸಮುದಾಯದ ಓಲೈಕೆಗಾಗಿ ಮಾತನಾಡಿದ್ದಾರೆ ಎಂಬುದು ಸುಳ್ಳು. ಹಾಗಾಗಿ ಇಂತಹ ವಿವಾದ ಸೃಷ್ಟಿಸುವ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಲೇಖಕ ಸಿದ್ದಸ್ವಾಮಿ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣದಲ್ಲಿ ನಾಲ್ವಡಿ ಅವರೊಂದಿಗೆ ಶ್ರಮಿಸಿದವರು ಮಿರ್ಜಾ ಇಸ್ಮಾಯಿಲ್ ಹೊರತು ವಿಶ್ವೇಶ್ವರಯ್ಯ ಅಲ್ಲ ಎಂದರು. ಪತ್ರಕರ್ತ ಸೋಮಯ್ಯ ಮಲೆಯೂರು, ದಸಂಸ ಜಿಲ್ಲಾ ಸಂಚಾಲಕ ಭುಗತಗಳ್ಳಿ ಮಣಿಯಯ್ಯ, ದಲಿತ ಮುಖಂಡ ಪುಟ್ಟರಾಜು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments