ಮೈಸೂರು ಸುತ್ತಮುತ್ತ ಹುಲಿ ಹಾವಳಿ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ. ಕಳೆದ ಒಂದು ತಿಂಗಳಿನಿಂದ ಹಲವಾರು ಹುಲಿಗಳನ್ನು ಸೆರೆ ಹಿಡಿದಿದ್ದರೂ ಅಲ್ಲೊಂದು ಇಲ್ಲೊಂದು ಹುಲಿ ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.
ಇತ್ತೀಚೆಗೆ ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಬೆಮೆಲ್ (BEML) ಕಾರ್ಖಾನೆಯ ಕಾಂಪೌಂಡ್ ಹಾರಿ ಹುಲಿ ಹೊರಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಮೆಲ್ ಕಾರ್ಖಾನೆಯ ಕಾಂಪೌಂಡ್ ಮೇಲೆ ತಂತಿ ಬೇಲಿ ಹಾಕಿದ್ದರೂ ಹುಲಿ ಸರಾಗವಾಗಿ ಹಾರಿ ಬೇಲಿ ದಾಟಿ ರಸ್ತೆಗೆ ಜಿಗಿದಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ಜನರಲ್ಲಿ ಆತಂಕ ಮೂಡಿಸಿದೆ.
ಹುಲಿ ಕಾಣಿಸಿಕೊಳ್ಳುತ್ತಿದ್ದಂತೆ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಹೀಗಾಗಿ, ಸಾರ್ವಜನಿಕರು ಹಾಗೂ ಸಿಬ್ಬಂದಿ ಎಚ್ಚರಿಕೆ ವಹಿಸುವಂತೆ ಇಲಾಖೆ ಸೂಚನೆ ನೀಡಿದೆ.
ಮೈಸೂರು ನಗರದ ಸಮೀಪವೇ ಇರುವ ಬಿಇಎಂಎಲ್ ಕಾರ್ಖಾನೆ ಬಳಿ ಕೆಲ ದಿನಗಳ ಹಿಂದಷ್ಟೇ ಹುಲಿ ಪ್ರತ್ಯಕ್ಷವಾಗಿ, ಆವರಣ ಹಾಗೂ ಪಾರ್ಕಿಂಗ್ ಸುತ್ತ ಓಡಾಡಿ, ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಆತಂಕ ಮೂಡಿಸಿತ್ತು.
ಇಲವಾಲದಲ್ಲಿರುವ ಬೆಮೆಲ್ ಕಚೇರಿಯ ಆವರಣದಲ್ಲಿ ಶುಕ್ರವಾರ ರಾತ್ರಿ ಹುಲಿ ಕಾಂಪೌಂಡ್ ಬಳಿ ಬಂದು ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಸೆರೆ ಹಿಡಿದು, ಮಾಧ್ಯಮಗಳಿಗೆ ನೀಡಿದ್ದರು.
ಕೆಲದಿನಗಳ ಹಿಂದೆ ಇಲವಾಲದ ಕಿರು ಅರಣ್ಯ ಪ್ರದೇಶದ ಸಮೀಪದ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡು ಭಯ ಹುಟ್ಟಿಸಿತ್ತು. ಇಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿದಿತ್ತು. ಮತ್ತೆ ಬೆಮೆಲ್ ಕಾರ್ಖಾನೆಯೊಳಗೆ ಹುಲಿ ಅಡ್ಡಾಡಿರುವುದರಿಂದ ನೌಕರರು ಬೆಚ್ಚಿ ಬಿದ್ದಿದ್ದರು.


