ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘಟದ ಅಧ್ಯಕ್ಷ ಕೆಂಪಣ್ಣ ಗುರುವಾರ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರಿಗೆ 84 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪಣ್ಣ ಇತ್ತೀಚೆಗಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ವಾಪಾಸಾಗಿದ್ದರು. ಗುರುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಜ್ಯೋತಿಪುರದ ನಿವಾಸದಲ್ಲಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ, ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದು ಸಂಚಲನ ಸೃಷ್ಟಿಸಿದ್ದರು. ಅಲ್ಲದೇ ಇತ್ತೀಚೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಕಮಿಷನ್ ಆರೋಪ ಮಾಡಿದ್ದರು.