ಹೊಂಡಾದಲ್ಲಿ ಈಜಲು ತೆರಳಿದ್ದ 14 ವರ್ಷದ ಬಾಲಕ ಅಪರೂಪ ಎನ್ನಲಾದ ಮೆದುಳು ತಿನ್ನುವ ಅಮಿಬಾ ವೈರಸ್ ನಿಂದ ಮೃತಪಟ್ಟ ಆಘಾತಕಾರಿ ಘಟನೆ ಕೇರಳದಲ್ಲಿ ಜರುಗಿದೆ.
ನೀರಿನಲ್ಲಿ ಸ್ವತಂತ್ರವಾಗಿ ಜೀವಿಸುವ ಈ ಅಮಿಬಾ ವೈರಾಣು ಅಪರೂಪದ್ದು ಎಂದು ಹೇಳಲಾಗಿದ್ದು, ಇದು ಮೆದುಳು ತಿಂದು ಅತ್ಯಂತ ವೇಗವಾಗಿ ನಿಷ್ಕ್ರಿಯ ಮಾಡುತ್ತದೆ ಎಂದು ಕೇರಳದ ಆರೋಗ್ಯ ಇಲಾಖೆ ತಿಳಿಸಿದೆ.
ಮೇ ನಂತರ ದಕ್ಷಿಣ ಭಾರತ ರಾಜ್ಯದಲ್ಲಿ ಈ ವೈರಾಣು ಪತ್ತೆಯಾದ ಮೂರನೇ ಪ್ರಕರಣವಾಗಿದೆ. ಮೇ 21ರಂದು ಮಲ್ಲಪುರಂನಲ್ಲಿ 5 ವರ್ಷದ ಬಾಲಕಿಯಲ್ಲಿ ಕಂಡು ಬಂದಿದ್ದರೆ, ಜೂನ್ 25ರಂದು ಕಣ್ಣೂರಿನಲ್ಲಿ 13 ವರ್ಷದ ಬಾಲಕಿಯಲ್ಲಿ ಅಮಿಬಾ ವೈರಸ್ ಪತ್ತೆಯಾಗಿತ್ತು.
ಅಮಿಬಾ ಸಾಮಾನ್ಯವಾಗಿ ಬೆಚ್ಚಗಿನ ಹರಿಯುವ ನೀರಿನಲ್ಲಿ ಕಂಡು ಬರುತ್ತದೆ. ಬಹಶಃ ಈ ಬಾಲಕ ಈಜಲು ಇಳಿದ ಹೊಂಡಾದಲ್ಲಿ ಬೇರೆ ಕಡೆಯಿಂದ ನೀರು ಬಂದಿರುವ ಕಾರಣ ಅಮಿಬಾ ವೈರಸ್ ಸೇರಿಕೊಂಡಿದೆ ಎಂದು ಶಂಕಿಸಲಾಗಿದೆ.
ಸಾಮಾನ್ಯವಾಗಿ ನೀರಿನಲ್ಲಿ ಕಂಡು ಬರುವ ಅಮಿಬಾ ವೈರಸ್ ಈಜುವಾಗ ಅಥವಾ ಸ್ನಾನ ಮಾಡುವಾಗ ಮೂಗಿನ ಮೂಲಕ ದೇಹವನ್ನು ಸೇರಿಕೊಂಡು ಮೆದುಳು ತಿನ್ನಲು ಆರಂಭಿಸುತ್ತದೆ. ಆದ್ದರಿಂದ ಅಪರಿಚಿತ ಸ್ಥಳದಲ್ಲಿ ನೀರಿಗೆ ಇಳಿಯುವಾಗ ಮೂಗಿಗೆ ನೇರವಾಗಿ ನೀರು ಹೋಗದಂತೆ ರಕ್ಷಣೆ ಪಡೆದುಕೊಳ್ಳಬೇಕು.
ಅಮಿಬಾ ವೈರಾಣು ದೇಹ ಪ್ರವೇಶಿಸಿದರೆ, ತಲೆನೋವು, ಜ್ವರ, ಶೀತ, ವಾಂತಿ ಆಗುತ್ತದೆ ಅಲ್ಲದೇ ಬುದ್ದಿಮತ್ತೆ ಕಡಿಮೆ ಆಗುತ್ತಾ ಹೋಗುತ್ತದೆ.