ಯಶಸ್ವಿ ಜೈಸ್ವಾಲ್ ಶತಕ ಮತ್ತು ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ನೆರವಿನಿಂದ ಭಾರತ ತಂಡ ಎರಡನೇ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತ ದಾಖಲಿಸಿದ್ದು, ಮೊದಲ ಟೆಸ್ಟ್ ಪಂದ್ಯ ಗೆಲ್ಲಲು ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ 534 ರನ್ ಮೊತ್ತದ ಕಠಿಣ ಒಡ್ಡಿದೆ.
ಪರ್ತ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ ವಿಕೆಟ್ ನಷ್ಟವಿಲ್ಲದೇ 172 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 487 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ ನಲ್ಲಿ 46 ರನ್ ಹಿನ್ನಡೆ ಅನುಭವಿಸಿದ್ದ ಆಸ್ಟ್ರೇಲಿಯಾ ಗೆಲ್ಲಲು 534 ರನ್ ಗುರಿ ಪಡೆದಿದೆ.
ಕೆಎಲ್ ರಾಹುಲ್ ಮತ್ತು ಜೈಸ್ವಾಲ್ 63 ಓವರ್ ಗಳನ್ನು ಎದುರಿಸಿ 201 ರನ್ ಜೊತೆಯಾಟ ನಿಭಾಯಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ರಾಹುಲ್ 176 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 77 ರನ್ ಬಾರಿಸಿ ಮೊದಲಿಗರಾಗಿ ಔಟಾದರೆ, ಜೈಸ್ವಾಲ್ 297 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 161 ರನ್ ಗಳಿಸಿ ನಿರ್ಗಮಿಸಿದರು. ಇದು ಜೈಸ್ವಾಲ್ ಗೆ 4ನೇ ಶತಕವಾಗಿದೆ.
ನಂತರ ಬಂದ ದೇವದತ್ ಪಡಿಕಲ್ (25), ರಿಷಭ್ ಪಂತ್ (1) ಮತ್ತು ವಾಷಿಂಗ್ಟನ್ ಸುಂದರ್ (29) ಬೇಗನೆ ನಿರ್ಗಮಿಸಿದರು. ಆದರೆ ಮೊದಲ ಇನಿಂಗ್ಸ್ ನಲ್ಲಿ ವಿಫಲರಾಗಿದ್ದ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನದಿಂದ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.
ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 100 ರನ್ ಪೂರೈಸುತ್ತಿದ್ದಂತೆ ತಂಡ ಡಿಕ್ಲೇರ್ ಘೋಷಿಸಿತು. ಕೊಹ್ಲಿ ಮತ್ತು ನಿತಿಶ್ ಕುಮಾರ್ ರೆಡ್ಡಿ ಮುರಿಯದ 7ನೇ ವಿಕೆಟ್ ಗೆ 8.4 ಓವರ್ ಗಳಲ್ಲಿ 77 ರನ್ ಜೊತೆಯಾಟದಿಂದ ತಂಡವನ್ನು ಮೊತ್ತ 500ರ ಗಡಿ ಸಮೀಪ ಕೊಂಡೊಯ್ದರು.
ಇದು ಕೊಹ್ಲಿಗೆ ಪರ್ತ್ ನೆಲದಲ್ಲಿ ಬಂದ ಎರಡನೇ ಶತಕವಾಗಿದೆ. ಅಲ್ಲದೇ ಆಸ್ಟ್ರೇಲಿಯಾ ನೆಲದಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರ ಎನಿಸಿಕೊಂಡರು. ಕೊಹ್ಲಿ ಕಾಂಗರೂ ನೆಲದಲ್ಲಿ 7ನೇ ಶತಕ ಸಿಡಿಸಿದರೆ, ಸಚಿನ್ ತೆಂಡೂಲ್ಕರ್ 6, ಸುನೀಲ್ ಗವಾಸ್ಕರ್ 5, ವಿವಿಎಸ್ ಲಕ್ಷ್ಮಣ್ 4 ನಂತರದ ಸ್ಥಾನದಲ್ಲಿದ್ದಾರೆ.
ಅಲ್ಲದೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ 2ನೇ ಆಟಗಾರರಾಗಿದ್ದು, ಇದು ಒಟ್ಟಾರೆ 9ನೇ ಶತಕವಾಗಿದೆ. ಸ್ಟೀವನ್ ಸ್ಮಿತ್ 9 ಶತಕ ಸಿಡಿಸಿ ಕೊಹ್ಲಿ ಜೊತೆ ಸ್ಥಾನ ಹಂಚಿಕೊಂಡಿದ್ದರೆ, ಸಚಿನ್ 11 ಶತಕದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿಗೆ ಇದು 30ನೇ ಟೆಸ್ಟ್ ಶತಕವಾಗಿದ್ದರೆ, ಒಟ್ಟಾರೆ 81ನೇ ಶತಕವಾಗಿದೆ. ಅಲ್ಲದೇ ಇದು ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿದ ಸುಮಾರು ಒಂದೂವರೆ ವರ್ಷದ ನಂತರ ಬಂದ ಟೆಸ್ಟ್ ಶತಕವಾಗಿದೆ.