ಸಂಘಟಿತ ಪ್ರದರ್ಶನ ನೀಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 24 ರನ್ ಗಳಿಂದ 5 ಬಾರಿಯ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ. ಈ ಮೂಲಕ ಕೆಕೆಆರ್ ವಾಂಖೇಡೆ ಕ್ರೀಡಾಂಗಣದಲ್ಲಿ ಮುಂಬೈ ವಿರುದ್ಧ 12 ವರ್ಷಗಳ ನಂತರ ಮೊದಲ ಬಾರಿ ಗೆದ್ದು ದಾಖಲೆ ಬರೆದಿದೆ.
ಮುಂಬೈ ವಾಂಖೇಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 19.5 ಓವರ್ ಗಳಲ್ಲಿ 169 ರನ್ ಗೆ ಆಲೌಟಾದರೆ, ಸುಲಭ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ 18.5 ಓವರ್ ಗಳಲ್ಲಿ 145 ರನ್ ಗೆ ಆಲೌಟಾಯಿತು. ಕೆಕೆಆರ್ 2012ರ ನಂತರ ಮೊದಲ ಬಾರಿ ವಾಂಖೇಡೆ ಮೈದಾನದಲ್ಲಿ ಮುಂಬೈ ವಿರುದ್ಧ ಗೆಲುವು ದಾಖಲಿಸಿದ ಸಾಧನೆ ಮಾಡಿತು.
ಈ ಮೂಲಕ ಮುಂಬೈ ಇಂಡಿಯನ್ಸ್ ಸತತ 4ನೇ ಸೋಲಿನೊಂದಿಗೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋಲುಂಡು ಪ್ಲೇಆಫ್ ರೇಸ್ ನಿಂದ ಬಹುತೇಕ ನಿರ್ಗಮಿಸಿತು. ಮುಂಬೈ ಇಂಡಿಯನ್ಸ್ 11 ಪಂದ್ಯಗಳಿಂದ 3 ಜಯ ಹಾಗೂ 8 ಸೋಲಿನೊಂದಿಗೆ 6 ಅಂಕ ಗಳಿಸಿ 9ನೇ ಸ್ಥಾನಕ್ಕೆ ಕುಸಿಯಿತು. ಕೆಕೆಆರ್ 10 ಪಂದ್ಯಗಳಿಂದ 7 ಜಯ ಹಾಗೂ 3 ಸೋಲಿನೊಂದಿಗೆ 14 ಅಂಕದೊಂದಿಗೆ ಎರಡನೇ ಸ್ಥಾನ ಪಡೆಯಿತು.
ಮುಂಬೈ ತಂಡ ಆರಂಭದಿಂದಲೇ ಸತತ ವಿಕೆಟ್ ಕಳೆದುಕೊಂಡಿದ್ದರಿಂದ ಸೋಲಿನ ಹಾದಿ ಹಿಡಿಯಿತು. ಒಂದು ಹಂತದಲ್ಲಿ 71 ರನ್ ಗೆ 6 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖಮಾಡಿತ್ತು.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 35 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 56 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರು. ಇವರಿಗೆ ಉತ್ತಮ ಬೆಂಬಲ ನೀಡಿದ ಟಿಮ್ ಡೇವಿಡ್ 20 ಎಸೆತಗಳಲ್ಲಿ 24 ರನ್ ಬಾರಿಸಿ 7ನೇ ವಿಕೆಟ್ ಗೆ 49 ರನ್ ಜೊತೆಯಾಟ ನಿಭಾಯಿಸಿ ಭರವಸೆ ಮೂಡಿಸಿದರು. ಆದರೆ ಸೂರ್ಯಕುಮಾರ್ ಔಟಾಗುತ್ತಿದ್ದಂತೆ ತಂಡ ಕುಸಿಯಿತು.
ಕೆಕೆಆರ್ ಪರ ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದು ಮಿಂಚಿದರೆ, ಸುನೀಲ್ ನರೇನ್, ವರುಣ್ ಚಕ್ರವರ್ತಿ ಮತ್ತು ಆಂಡ್ರೆ ರಸೆಲ್ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೆಕೆಆರ್ ತಂಡ 57 ರನ್ ಗೆ 5 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ ವೆಂಕಟೇಶ್ ಅಯ್ಯರ್ ಮತ್ತು ಮನೀಷ್ ಪಾಂಡೆ 6ನೇ ವಿಕೆಟ್ ಗೆ 83 ರನ್ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ವೆಂಕಟೇಶ್ ಅಯ್ಯರ್ 52 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 70 ರನ್ ಬಾರಿಸಿದರು. ಮನೀಷ್ ಪಾಂಡೆ 31 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 42 ರನ್ ಗಳಿಸಿದರು.