ಕನ್ನಡಿಗ ಕೆಎಲ್ ರಾಹುಲ್ ಗೆ ಮೈದಾನದಲ್ಲಿ ಅಪಮಾನ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ ಇದೀಗ ಐಪಿಎಲ್ ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆ ಮಾಡಿದೆ.
ಆಟಗಾರರನ್ನು ಉಳಿಸಿಕೊಳ್ಳುವ ಗಡುವು ಮುಗಿದ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಲಹೆಗಾರ ಜಹೀರ್ ಖಾನ್ ವರದಿ ಸೋರಿಕೆಯಾಗಿದ್ದು, ಕೆಎಲ್ ರಾಹುಲ್ ಅವರನ್ನು 2025ರ ಹರಾಜಿಗೂ ಮುನ್ನ ಬಿಡುಗಡೆ ಮಾಡಿದೆ.
ಕೆಎಲ್ ರಾಹುಲ್ ಐಪಿಎಲ್ ಭವಿಷ್ಯದ ಬಗ್ಗೆ ಸಾಕಷ್ಟು ಅನುಮಾನಗಳಿಗೆ ಇದೀಗ ಲಕ್ನೋ ಸೂಪರ್ ಜೈಂಟ್ಸ್ ತೆರೆ ಎಳೆದಿದ್ದು, ಇದೀಗ ರಾಹುಲ್ ಆರ್ ಸಿಬಿ ತಂಡದ ಪರ ಆಡುತ್ತಾರೆಯೇ ಅಥವಾ ಹರಾಜಿನಲ್ಲಿ ರೈಟ್ ಟು ಮ್ಯಾಚ್ ಬಳಸಿ ತಂಡದಲ್ಲಿ ಉಳಿಸಿಕೊಳ್ಳಲು ಲಕ್ನೋ ಪ್ರಯತ್ನಿಸಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಲಕ್ನೋ ಸೂಪರ್ ಜೈಂಟ್ಸ್ ಆಡಳಿತ ಮಂಡಳಿಯ ಸಭೆಯಲ್ಲಿ ರಾಹುಲ್ ಅವರನ್ನು ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮತದಾನ ನಡೆದಿದ್ದು, ಸಭೆಯಲ್ಲಿ ರಾಹುಲ್ ಪರ ಬಹುಮತ ಬರಲಿಲ್ಲ ಎಂದು ಹೇಳಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಸಲಹೆಗಾರ ಜಹೀರ್ ಖಾನ್ ರಾಹುಲ್ ಅವರ ಪ್ರದರ್ಶನ ಕುರಿತು ವಿಶ್ಲೇಷಣಾ ವರದಿ ನೀಡಿದ್ದು, ಕೆಎಲ್ ರಾಹುಲ್ ಹೆಚ್ಚು ಹೊತ್ತು ಆಡಿದಾಗ ಹಾಗೂ ಹೆಚ್ಚು ರನ್ ಗಳಿಸದ ಬಹುತೇಕ ಪಂದ್ಯಗಳನ್ನು ಲಕ್ನೋ ಸೋತಿದೆ ಎಂದು ಆರೋಪಿಸಿದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪ್ರಕಾರ ಬೇರೋಬ್ಬ ಆಟಗಾರನಿಗೆ ಅವಕಾಶ ನೀಡೋಣ ಅಂದರೆ ಓವರ್ ಗಳು ಬಹುತೇಕ ಮುಗಿದಿರುತ್ತದೆ. ಅಲ್ಲದೇ ನಾಯಕನಾಗಿ ರಾಹುಲ್ ಅವರನ್ನು ಬದಲಿಸುವ ಅವಕಾಶ ಇರುವುದಿಲ್ಲ. ಈ ಎಲ್ಲಾ ಸಮಸ್ಯೆಗಳ ಹಿನ್ನೆಲೆಯಲ್ಲಿ ರಾಹುಲ್ ಅವರನ್ನು ತಂಡದಿಂದ ಕೈಬಿಡುವುದೇ ಉತ್ತಮ ಎಂದು ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.
157 ಕಿ.ಮೀ. ವೇಗದಲ್ಲಿ ಚೆಂಡು ಎಸೆಯುವ ವೇಗಿ ಮಯಾಂಕ್ ಯಾದವ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಪ್ರಮುಖ ಮೂವರು ಆಟಗಾರರಲ್ಲಿ ಸ್ಥಾನ ಪಡೆದಿದ್ದಾರೆ. ಆಯುಷ್ ಬದೋನಿ ಮತ್ತು ಮೊಹಸಿನ್ ಖಾನ್ ಉಳಿದ ಇಬ್ಬರು ಆಟಗಾರರು ತಂಡದಲ್ಲಿ ಉಳಿಯಲಿದ್ದಾರೆ ಎಂದು ಹೇಳಲಾಗಿದೆ.
ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಟುಕೊಟ್ಟರೆ ಅವರನ್ನು ನಾಯಕ ಸ್ಥಾನಕ್ಕೆ ತರಲು ಲಕ್ನೋ ಸೂಪರ್ ಜೈಂಟ್ಸ್ ಪ್ರಯತ್ನ ನಡೆಸಿದೆ.