ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಡ್ಲಿ ಮತ್ತು ದೋಸೆಗೆ ಅಪಾರ ಬೇಡಿಕೆಯನ್ನು ಮನಗಂಡಿರುವ ಕರ್ನಾಟಕ ಹಾಲು ಉತ್ಪನ್ನ ಸಂಸ್ಥೆ ಕೆಎಂಫ್ ಇಡ್ಲಿ ಮತ್ತು ದೋಸೆ ಹಿಟ್ಟು ಉತ್ಪನ್ನ ಮಾರಾಟಕ್ಕೆ ಮುಂದಾಗಿದೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ `ಕನ್ನಡವಾಹಿನಿ’ಗೆ ಈ ವಿಷಯ ತಿಳಿಸಿದ್ದು, ಇಡ್ಲಿ ಮತ್ತು ದೋಸೆ ಹಿಟ್ಟನ್ನು ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುವುದಾಗಿ ತಿಳಿಸಿದ್ದಾರೆ.
ಐಡಿ, ಅಸಲ್, ಎಂಟಿಆರ್ ಮುಂತಾದ ಖಾಸಗಿ ಕಂಪನಿಗಳು ಈಗಾಗಲೇ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರಾಟ ಮಾಡುತ್ತಿವೆ. ಈ ಕಂಪನಿಗಳಿಗೆ ಪೈಪೋಟಿ ನೀಡುವ ಮೂಲಕ ಮಾರುಕಟ್ಟೆ ಪ್ರವೇಶಿಸಲು ಕೆಎಂಎಫ್ ಸಿದ್ಧತೆ ನಡೆಸಿದೆ.
450 ಗ್ರಾಂ ಮತ್ತು 900 ಗ್ರಾಂ ತೂಕದ ಎರಡು ಪ್ಯಾಕೆಟ್ ಗಳ ಮೂಲಕ ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟ ಮಾಡಲಿದ್ದು, ವಾರ್ಷಿಕ 1,09,000 ಕೆಜಿ ಮಾರಾಟದ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಈ ಬಗ್ಗೆ ಟೆಂಡರ್ ಕರೆಯಲಾಗಿದ್ದು, ಜುಲೈನಲ್ಲಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ. ನಂತರ ಉತ್ಪಾದನೆ ಆರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಆಹಾರದ ಗುಣಮಟ್ಟ ಸೇರಿದಂತೆ ಪ್ರತಿಯೊಂದು ವಿಷಯದ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಜಗದೀಶ್ ವಿವರಿಸಿದರು.