ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 8000 ರನ್ ಪೂರೈಸಿದ ಮೊದಲ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪ್ಲೇಆಫ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 29 ರನ್ ಗಳಿಸಿದ್ದಾಗ 8000 ರನ್ ಪೂರೈಸಿದರು. ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ 7000 ರನ್ ಗಡಿ ಕೂಡ ದಾಟಿಲ್ಲ ಅಂದರೆ ಕೊಹ್ಲಿ ಐಪಿಎಲ್ ನಲ್ಲಿ ಎಷ್ಟು ರನ್ ಹೊಳೆ ಹರಿಸಿದ್ದಾರೆ ಎಂಬುದು ತಿಳಿಯುತ್ತದೆ.
ಕೊಹ್ಲಿ ಈ ಬಾರಿ ಐಪಿಎಲ್ ನಲ್ಲಿ 700ಕ್ಕಿಂತ ಹೆಚ್ಚು ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. 2016ರಲ್ಲಿ 973 ರನ್ ಗಳಿಸಿರುವುದು ಅವರ ಒಂದು ಆವೃತ್ತಿಯಲ್ಲಿನ ಗರಿಷ್ಠ ಸಾಧನೆಯಾಗಿದೆ.
ಆರ್ ಸಿಬಿ ತಂಡದ ಮಾಜಿ ನಾಯಕ ಕೂಡ ಆಗಿರುವ ಕೊಹ್ಲಿ 8 ಶತಕ, 55 ಅರ್ಧಶತಕ ಗಳಿಸಿದ್ದು, ಭಾರತದ ನೆಲದಲ್ಲಿ ಟಿ-20 ಕ್ರಿಕೆಟ್ ನಲ್ಲಿ 9000 ರನ್ ಗಳಿಸಿದ ಮತ್ತೊಂದು ದಾಖಲೆಯನ್ನೂ ಹೊಂದಿದ್ದಾರೆ.
ಬೆಂಗಳೂರಿನಲ್ಲಿಯೇ ಅಂದರೆ ತವರಿನಲ್ಲಿ 3000 ರನ್ ಬಾರಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಚಿನ್ನಸ್ವಾಮಿಯಲ್ಲಿ ಆಡಿದ 86 ಇನಿಂಗ್ಸ್ ಗಳಲ್ಲಿ 4 ಶತಕ ಹಾಗೂ 22 ಅರ್ಧಶತಕ ಬಾರಿಸಿದ್ದಾರೆ.