ಭಾರತ ತಂಡದ ನೂತನ ಕೋಚ್ ಪಾದರ್ಪಣೆ ಮಾಡಲಿರುವ ಶ್ರೀಲಂಕಾ ಏಕದಿನ ಸರಣಿಯಿಂದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರಿಗೆ ವಿಶ‍್ರಾಂತಿ ನೀಡಲಿದ್ದು, ಹಾರ್ದಿಕ್ ಪಾಂಡ್ಯ ಅಥವಾ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
ಆಗಸ್ಟ್ ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ‍್ಳಲಿರುವ ಭಾರತ ತಂಡ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಅವರ ಗುತ್ತಿಗೆ ಅವಧಿ ಅಂತ್ಯಗೊಂಡಿದ್ದು, ಕೋಚ್ ಸ್ಥಾನ ಪ್ರಸ್ತುತ ಖಾಲಿಯಿದೆ.
ಕೋಲ್ಕತಾ ನೈಟ್ ರೈಡರ್ಸ್ ತಂಡದ ಕೋಚ್ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ನೂತನ ಕೋಚ್ ನೇಮಕದ ಅಧಿಕೃತ ಘೋಷಣೆ ಬಾಕಿಯಿದೆ.
ಶ್ರೀಲಂಕಾ ವಿರುದ್ಧ ಭಾರತ ತಂಡವನ್ನು ಮುನ್ನಡೆಸಲು ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಜೊತೆ ಬಿಸಿಸಿಐ ಆಯ್ಕೆ ಸಮಿತಿ ಮಾತುಕತೆ ನಡೆಸಿದೆ. ಕೆಎಲ್ ರಾಹುಲ್ ಟಿ-20 ವಿಶ್ವಕಪ್ ಸರಣಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.
ಐಪಿಎಲ್ ಬೆನ್ನಲ್ಲೇ ಟಿ-20 ವಿಶ್ವಕಪ್ ಟೂರ್ನಿ ಇದ್ದಿದ್ದರಿಂದ ಆಟಗಾರರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಲಾಗಿದೆ. ಕಳೆದ 6 ತಿಂಗಳಿಂದ ರೋಹಿತ್ ಶರ್ಮ ಅತ್ಯಂತ ಒತ್ತಡದ ದಿನಗಳನ್ನು ಎದುರಿಸಿದ್ದು, ಅವರಿಗೆ ಸೂಕ್ತ ವಿಶ್ರಾಂತಿ ಅಗತ್ಯವಿದೆ. ಕೊಹ್ಲಿ ಹಲವಾರು ಬಾರಿ ವಿಶ್ರಾಂತಿ ಪಡೆದಿದ್ದರೂ ಕಳೆದ ಮೂರು ತಿಂಗಳಲ್ಲಿ ಹೆಚ್ಚು ಕ್ರಿಕೆಟ್ ಆಡಿದ್ದಾರೆ.
ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದು, ಏಕದಿನ ಮತ್ತು ಟೆಸ್ಟ್ ನಲ್ಲಿ ಮುಂದುವರಿಯಲಿದ್ದಾರೆ. ರೋಹಿತ್ ಶರ್ಮ ಮುಂದಿನ ವರ್ಷದವರೆಗೂ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಈಗಾಗಲೇ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜೈ ಶಾ ಸ್ಪಷ್ಟಪಡಿಸಿದ್ದಾರೆ.
ಶ್ರೀಲಂಕಾ ಸರಣಿ ನಂತರ ಭಾರತ ತಂಡ 2 ಟೆಸ್ಟ್ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಡಲಿದೆ. ನಂತರ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ನಂತರ ಅತ್ಯಂತ ಪ್ರತಿಷ್ಠಿತ ಗಾವಸ್ಕರ್-ಬಾರ್ಡರ್ ಕಪ್ ಸರಣಿಯಲ್ಲಿ ಆಸ್ಟ್ರೇಲಿಯಾ ಜೊತೆ ಸೆಣಸಲಿದೆ.