ಕೋಲ್ಕತಾದಲ್ಲಿ ವೈದ್ಯೆ ಹತ್ಯೆ ಖಂಡಿಸಿ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿರುವ ಬೃಹತ್ ಪ್ರತಿಭಟನೆ ಉದ್ವಿಗ್ನತೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಲಾಠಿಪ್ರಹಾರ ನಡೆಸಿದ್ದಾರೆ.
ನಭಾನೊ ಅಭಿಯಾನ್ ಹೆಸರಲ್ಲಿ ಬೃಹತ್ ಪ್ರತಿಭಟನೆ ಮಂಗಳವಾರ ಬೆಳಿಗ್ಗೆ ಆರಂಭಗೊಂಡಿದ್ದು, ಹಿಂಸಾಚಾರದ ಸುಳಿವಿನ ಹಿನ್ನೆಲೆಯಲ್ಲಿ ಕೋಲ್ಕತಾ ಪೊಲೀಸ್ ಇಲಾಖೆ 6000 ಪೊಲೀಸರು ಹಾಗೂ ಮೂರು ಸ್ತರಗಳ ಭದ್ರತಾ ವ್ಯವಸ್ಥೆಯನ್ನು ಮಾಡಿತ್ತು.
ಮೆರವಣಿಗೆ ಆಗಮಿಸುತ್ತಿದ್ದ ಪ್ರತಿಭಟನಾಕಾರರು ಹೌರಾ ಸೇತುವೆ ಬಳಿ ಬರುತ್ತಿದ್ದಂತೆ ಕಲ್ಲುತೂರಾಟಕ್ಕೆ ಮುಂದಾದರು. ಅಲ್ಲದೇ ಪೊಲೀಸ್ ಬ್ಯಾರಿಕೇಡ್ ಮುರಿದು ನುಗ್ಗಲು ಪ್ರಯತ್ನಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದೂ ಅಲ್ಲದೇ ಅಶ್ರುವಾಯು ಸಿಡಿಸಿದರು.
ಪ್ರತಿಭಟನೆ ವೇಳೆ ಕಲ್ಲುತೂರಾಟ ನಡೆಸಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿಭಟನಾಕರರು ದಾಂಧಲೆಗೆ ಇಳಿದಿದ್ದರಿಂದ ಗೊಂದಲ ಏರ್ಪಟ್ಟಿತು.
ಆಗಸ್ಟ್ 9ರಂದು ಕೋಲ್ಕತಾದ ಆರ್ ಜೆ ಆಸ್ಪತ್ರೆಯಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಂತರ ಹತ್ಯೆ ಮಾಡಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ವಿಚಾರಣೆ ಕೂಡ ನಡೆಸುತ್ತಿದೆ.
ಈ ಹಂತದಲ್ಲಿ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳದ ಪೊಲೀಸರು 6000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಪ್ರತಿಭಟನೆ ವೇಳೆ ಕಣ್ಗಾವಲು ಇಡಲು ರೋಬೋ ಕಾಪ್, ಡ್ರೋಣ್ ಗಳನ್ನು ಕೂಡ ನಿಯೋಜಿಸಲಾಗಿದ್ದು, ಮೂರು ಸ್ತರಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. 26 ಡೆಪ್ಯೂಟಿ ಪೊಲೀಸ್ ಕಮಿಷನರ್ ಗಳಿಗೆ ವಿವಿಧ ಆಯಕಟ್ಟಿನ ಜಾಗದ ಉಸ್ತುವಾರಿ ವಹಿಸಲಾಗಿದೆ.