ಜೆಡಿಎಸ್ ಪಕ್ಷವನ್ನು ಬೇರೆ ಯಾರೂ ಮುಳುಗಿಸುವ ಅವಶ್ಯಕತೆ ಇಲ್ಲ. ಸ್ವತಃ ಎಚ್.ಡಿ. ಕುಮಾರಸ್ವಾಮಿ ಅವರೇ ಡೆಮಾಲಿಷ್ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಜಿಟಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯ ಸೋಲು ಜೆಡಿಎಸ್ ಗೆ ಪಾಠ ಎಂದು ಹೇಳಿದ್ದಾರೆ.
ದೇವೇಗೌಡರು ಕಟ್ಟಿದ ಜೆಡಿಎಸ್ ಪಕ್ಷವನ್ನು ಎಚ್.ಡಿ. ಕುಮಾರಸ್ವಾಮಿ ಡೆಮಾಲಿಷ್ ಮಾಡುತ್ತಿದ್ದಾರೆ. ನನ್ನನ್ನು ಅವರು ಹಿರಿಯ ರಾಜಕಾರಣಿ ಎಂದು ಪರಿಗಣಿಸಿಯೇ ಇಲ್ಲ. ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ನನ್ನನ್ನು ಕೂಡ ಕರೆಯಲಿಲ್ಲ ಎಂದು ಅವರು ಹೇಳಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಸೋಲಿಗೆ ಕಾರಣ ಗೊತ್ತಿಲ್ಲ. ಆ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಿಲ್ಲ, ಏನಾಗಿದೆ ತಿಳಿದು ಮಾತಾಡುತ್ತೇನೆ. ಮೂರು ಬಾರಿ ಸೋತವರು ಗೆದ್ದು ಉನ್ನತ ಸ್ಥಾನಕ್ಕೆ ಹೋಗಿದ್ದಾರೆ. ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು. ಧೈರ್ಯವಾಗಿ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದ್ದಾರೆ.
ಚನ್ನಪಟ್ಟಣ ಪ್ರಚಾರಕ್ಕೆ ನನ್ನನ್ನು ಯಾರು ಕರೆದಿದ್ದರು ಹೇಳಿ. ಅಭ್ಯರ್ಥಿ ಕರೆಯಲಿಲ್ಲ, ದೊಡ್ಡವರು ಕೂಡ ಪ್ರಚಾರಕ್ಕೆ ಕರೆದಿಲ್ಲ. ಅವರಿಗೆ ನನ್ನ ಅವಶ್ಯಕತೆ ಇದ್ದಂತೆ ಕಾಣುತ್ತಿಲ್ಲ. ಜಿ.ಟಿ.ದೇವೇಗೌಡಗೆ ವಯಸ್ಸಾಗಿದೆ, ರಾಜಕೀಯದಿಂದ ನಿವೃತ್ತಿಯಾಗಲಿ, ನಮಗೆ ಅವರ ಮಗ ಹರೀಶ್ಗೌಡ ಸಾಕು ಎಂಬ ಆದೇಶ ಅವರಿಂದ ಆಗಿದೆ ಎಂದು ಅವರು ಹೇಳಿದರು.
ನನಗೆ ರಾಜಕೀಯದಿಂದ ನಿವೃತ್ತಿಕೊಡಿಸಲು ಅವರು ತಯಾರಿದ್ದಾರೆ. ಅವರಿಗೆ ಗೊತ್ತು ಕಾಂಗ್ರೆಸ್ ಫುಲ್ ಆಗಿದೆ, JDS, ಬಿಜೆಪಿ ಒಂದಾಗಿದೆ. ಹೀಗಾಗಿ ಜಿಟಿಡಿ ನಿವೃತ್ತಿ ತೆಗೆದುಕೊಳ್ಳಲಿ ಎಂಬ ಭಾವನೆಯಲ್ಲಿದ್ದಾರೆ. ನನಗೂ, ಹೆಚ್.ಡಿ.ಕುಮಾರಸ್ವಾಮಿ ನಡುವೆ ಯಾವ ಮುನಿಸೂ ಇಲ್ಲ. ಅವರು ಆ ರೀತಿ ಬಿಂಬಿಸಿ ಬಿಡುತ್ತಾರೆ, ನಾನೇನು ಮಾಡಲಿ ಹೇಳಿ ಎಂದಿದ್ದಾರೆ.