ಮೈಸೂರು-ಕೊಡಗು ಲೋಕಸಭೆಗೆ 2 ಬಾರಿಯ ಸಂಸದ ಪ್ರತಾಪ್ ಸಿಂಹ ಬಿಜೆಪಿಯಿಂದ ಟಿಕೆಟ್ ಪಡೆಯುವುದು ಅನುಮಾನವಾಗಿದ್ದು, ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಕಳೆದ ಕೆಲ ದಿನಗಳಿಂದ ಯದುವೀರ್ ಒಡೆಯರ್ ಹೆಸರು ಕೇಳಿ ಬರುತ್ತಿದ್ದು, ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಯದುವೀರ್ ಒಡೆಯರ್ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಪಟ್ಟಿ ನಾಳೆ ಹೊರಬೀಳುವ ಸಾಧ್ಯತೆ ಇದೆ.
ಯದುವೀರ್ ಒಡೆಯರ್ ಅವರನ್ನು ಬಿಜೆಪಿ ಸಂಪರ್ಕಿಸಿದ್ದು ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಮೋದಾ ದೇವಿ ಗ್ರೀನ್ ಸಿಗ್ನಲ್‌ಗೆ ನಾಯಕರು ಕಾಯುತ್ತಿದ್ದಾರೆ. ಒಂದು ವೇಳೆ ಪ್ರಮೋದಾ ದೇವಿ ಒಪ್ಪಿಗೆ ನೀಡಿದರೆ ಯದುವೀರ್ ಒಡೆಯರ್ ರಾಜಕಿಯ ಪ್ರವೇಶಿಸಲಿದ್ದಾರೆ.
ಯಡಿಯೂರಪ್ಪ ಮತ್ತು ಆರ್‌ಎಸ್‌ಎಸ್ ನಾಯಕರೊಬ್ಬರ ಮೂಲಕ ಯದುವೀರ್ ಅವರನ್ನು ಮನವೊಲಿಕೆ ಮಾಡಲಾಗಿದೆ. ಮನವೊಲಿಕೆಯ ಬೆನ್ನಲ್ಲೇ ಪ್ರತಾಪ್ ಸಿಂಹ ಜೊತೆ ಯದುವೀರ್ ಒಡೆಯರ್ ಹೆಸರನ್ನು ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲೇ ಶಿಫಾರಸ್ಸು ಮಾಡಲಾಗಿತ್ತು.
ಇದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಹೊಸಬರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ಆಗಿದೆ. ಆದರೆ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದ್ದಾರೆ.