ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಆಘಾತಕಾರಿ ಘಟನೆ ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ನಡೆದಿದೆ.
ಮೈಸೂರಿನ ಇಂಜಿನಿಯರ್ ವಿದ್ಯಾರ್ಥಿಗಳಾದ ನಿಶಿತಾ ಎಂಡಿ (21), ಪಾರ್ವತಿ ಎಸ್ (20) ಹಾಗೂ ಕೀರ್ತನಾ ಎನ್ (21) ಮೃತ ಯುವತಿಯರು. ಪ್ರಕರಣದ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಬೆಳಗ್ಗೆ ಬೀಚ್ ರೆಸಾರ್ಟ್ ಗೆ ಆಗಮಿಸಿದ್ದ ಮೂವರು ಯುವತಿಯರು ಕೊಠಡಿ ಪಡೆದಿದ್ದರು. ಭಾನುವಾರ ಬೆಳಗ್ಗೆ 8:30ರ ಸುಮಾರಿಗೆ ಈಜುಕೊಳಕ್ಕೆ ಇಳಿದಿದ್ದ ಯುವತಿಯರು ಆಟವಾಡುತ್ತಿದ್ದ ವೇಳೆ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ವಿಮ್ಮಿಂಗ್ ಪೂಲ್‌ನಲ್ಲಿ ಒಂದು ಬದಿ 6 ಅಡಿಯಷ್ಟು ಆಳವಿತ್ತು. ಈ ವೇಳೆ ಆಯತಪ್ಪಿ ಓರ್ವ ಯುವತಿ ಮುಳುಗಿದ್ದಾಳೆ. ಆಕೆಯ ರಕ್ಷಣೆಗೆ ತೆರಳಿದ ಉಳಿದ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ರೆಸಾರ್ಟ್ ನ ಇಬ್ಬರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಈಜುವ ದೃಶ್ಯವನ್ನು ಐಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈಜು ಕೊಳ ಸಂಪೂರ್ಣ ಕವರ್ ಆಗುವಂತೆ ಸ್ವಲ್ಪ ದೂರದಲ್ಲಿ ಐಫೋನ್ ಇರಿಸಿದ್ದರು. ಈಜು ಬಾರದ ಮೂವರು ಆರಂಭದಲ್ಲಿ ಕೊಳದಲ್ಲಿ ಆಡುತ್ತಿದ್ದರು. ಓರ್ವ ಯುವತಿ 6 ಅಡಿ ಆಳದ ಜಾಗಕ್ಕೆ ಹೋಗಿದ್ದು ಮುಳುಗಲು ಆರಂಭಿಸಿದ್ದಾಳೆ. ಆಕೆ ಒಬ್ಬರ ನಂತರ ಒಬ್ಬರಂತೆ ಇಬ್ಬರು ಹೋಗಿದ್ದು ಮೂವರು ಮುಳುಗಿದ್ದಾರೆ.
ನಿಯಮದ ಪ್ರಕಾರ ರೆಸಾರ್ಟ್ ಗಳಲ್ಲಿ 4 ಅಡಿಗಿಂತ ಹೆಚ್ಚು ಆಳದ ಈಜುಕೊಳ ನಿರ್ಮಿಸುವಂತಿಲ್ಲ. ಅಲ್ಲದೇ ಆಳದ ಈಜುಕೊಳ ನಿರ್ಮಿಸಿದ್ದರೆ ಕನಿಷ್ಠ ಒಬ್ಬ ಸಿಬ್ಬಂದಿ ಈಜುಕೊಳದ ಬಳಿ ರಕ್ಷಣೆಗೆ ನಿಲ್ಲಿಸಬೇಕಿತ್ತು. ಆದರೆ ರೆಸಾರ್ಟ್ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದ ಈ ದುರಂತ ಸಂಭವಿಸಿದೆ.