ಶತಕ ವಂಚಿತ ಶುಭಮನ್ ಗಿಲ್ ಅವರ ಹೋರಾಟದಿಂದ ಭಾರತ ತಂಡ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 263 ರನ್ ಗೆ ಆಲೌಟಾದರೂ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ 28 ರನ್ ಗಳ ಅಲ್ಪ ಮುನ್ನಡೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ.
ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ 4 ವಿಕೆಟ್ ಗೆ 86 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಚಹಾ ವಿರಾಮಕ್ಕೂ ಮುನ್ನವೇ 263 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.
ನಿನ್ನೆ ಅಜೇಯರಾಗಿ ಉಳಿದಿದ್ದ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ 5ನೇ ವಿಕೆಟ್ ಗೆ 96 ರನ್ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಿದ್ದೂ ಅಲ್ಲದೇ ಹೋರಾಟ ಕಿಚ್ಚು ಹಚ್ಚಿದರು.
ರಿಷಭ್ ಪಂತ್ 59 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 60 ರನ್ ಬಾರಿಸಿ ಔಟಾದರೆ, ಶುಭಮನ್ ಗಿಲ್ 146 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 90 ರನ್ ಗಳಿಸಿದ್ದಾಗ ಔಟಾಗಿ ನರ್ವರ್ಸ್ 90ಗೆ ಔಟಾಗಿ 10 ರನ್ ಗಳಿಂದ ಶತಕ ವಂಚಿತರಾದರು.
ವಾಷಿಂಗ್ಟನ್ ಸುಂದರ್ 36 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ ಅಜೇಯ 38 ರನ್ ಬಾರಿಸಿ ಕೊನೆಯ ಹಂತದಲ್ಲಿ ರನ್ ವೇಗ ಹೆಚ್ಚಿಸಿ ತಂಡಕ್ಕೆ ಮುನ್ನಡೆ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು. ನ್ಯೂಜಿಲೆಂಡ್ ಪರ ಸ್ಪಿನ್ನರ್ ಅಜಿಜ್ ಪಟೇಲ್ 5 ವಿಕೆಟ್ ಪಡೆದು ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.