ಮದುವೆ ಸೀಸನ್ ಆರಂಭವಾಗಿದ್ದು, ಎರಡು ತಿಂಗಳಲ್ಲಿ ದೇಶಾದ್ಯಂತ 48 ಲಕ್ಷ ಮದುವೆ ಸಮಾರಂಭಗಳು ನಡೆಯಲಿವೆ. ಇದರಿಂದ 6 ಲಕ್ಷ ಕೋಟಿ ರೂ. ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಹೇಳಿದೆ.
ನವೆಂಬರ್ ಮತ್ತು ಡಿಸೆಂಬರ್ ಮದುವೆ ಸೀಸನ್ ಆಗಿದ್ದು, ಅತೀ ಹೆಚ್ಚು ಮದುವೆ ಸಮಾರಂಭಗಳು ನಡೆಯುತ್ತವೆ. ಈ ಬಾರಿ ದೇಶದ ಪ್ರಮುಖ 75 ನಗರಗಳಲ್ಲಿ ಸುಮಾರು 48 ಲಕ್ಷ ವಿವಾಹಗಳು ನಡೆಯುವ ನಿರೀಕ್ಷೆ ಇದೆ ಎಂದು ಸಿಎಐಟಿ ವರದಿ ಹೇಳಿದೆ.
ಮದುವೆಗೆ ಸಂಬಂಧಿಸಿದ ಸರಕುಗಳು ಮತ್ತು ಸೇವೆಗಳಲ್ಲಿ ವ್ಯವಹರಿಸುತ್ತಿರುವ ಪ್ರಮುಖ ವ್ಯಾಪಾರಿ ಸಂಸ್ಥೆಗಳೊಂದಿಗೆ ಚರ್ಚೆಯಿಂದ ಪಡೆದ ಡೇಟಾವನ್ನು ಆಧರಿಸಿ ಸಿಎಐಟಿಯೂ ಈ ಅಂದಾಜನ್ನು ಮಾಡಿದೆ. 2024 ನವೆಂಬರ್ ನಿಂದ 2025 ಫೆಬ್ರವರಿ ವರೆಗಿನ ಮದುವೆಯ ಋತುವಿನಲ್ಲಿ ಮದುವೆ ನಡೆಸಲು ಸಿದ್ಧತೆ ನಡೆದಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ರಾಜಧಾನಿ ದೆಹಲಿಯಲ್ಲಿಯೇ ಸುಮಾರು4.5 ಲಕ್ಷ ಮದುವೆಗಳು ನಡೆಯಲಿದ್ದು, 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ನಿರೀಕ್ಷಿಸಲಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 35 ಲಕ್ಷ ವಿವಾಹಗಳಿಂದ ಒಟ್ಟು 4.25 ಲಕ್ಷ ಕೋಟಿ ರೂಪಾಯಿಗಳಷ್ಟೇ ಆದಾಯವಾಗಿತ್ತು.
ಈ ವರ್ಷದ ಮದುವೆ ಋತುವಿನಲ್ಲಿ ದೇಶಾದ್ಯಂತ ಸುಮಾರು 40 ಲಕ್ಷ ಮದುವೆಗಳನ್ನು 3 ಲಕ್ಷದಿಂದ ಪ್ರಾರಂಭವಾಗಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಸಲಾಗುವುದು ಎಂದು ಅಂದಾಜಿಸಲಾಗಿದೆ. 7 ಲಕ್ಷ ಮದುವೆಗೆ 25 ಲಕ್ಷ ರೂ, 50 ಸಾವಿರ ಮದುವೆಗಳಿಗೆ 50 ಲಕ್ಷ ರೂ ಹಾಗೂ 50 ಸಾವಿರ ಮದುವೆ ಸಮಾರಂಭಗಳಿಗೆ ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚು ವೆಚ್ಚವಾಗಲಿದೆ ಎನ್ನಲಾಗಿದೆ.
ಈ ಬಾರಿಯ ಮದುವೆಯ ವೆಚ್ಚಗಳನ್ನು ಸರಕು ಮತ್ತು ಸೇವೆಗಳ ನಡುವೆ ವಿಂಗಡಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಜವಳಿ, ಸೀರೆಗಳು, ಲೆಹೆಂಗಾಗಳು, ಎಲೆಕ್ಟ್ರಾನಿಕ್ಸ್, ವಿದ್ಯುತ್ ಉಪಕರಣಗಳು ಸೇರಿದಂತೆ ಗ್ರಾಹಕ ಬಾಳಿಕೆ ಬರುವ ವಸ್ತುಗಳು ಸೇರಿದಂತೆ ಉಡುಪುಗಳು ಒಳಗೊಂಡಿದೆ.