ಚಿತ್ರರಂಗದಲ್ಲಿ ನಾಲ್ಕು ದಶಕಗಳಿಂದ ತೊಡಗಿಸಿಕೊಂಡ ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತಿ ಪಡೆದ ನಟ ಆಮೀರ್ ಖಾನ್ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಏಕಕಾಲದಲ್ಲಿ 6 ಸಿನಿಮಾಗಳಲ್ಲಿ ನಟಿಸಲಿದ್ದಾರೆ.
ಹೌದು, ಈ ವಿಷಯವನ್ನು ಸ್ವತಃ 59 ವರ್ಷದ ಆಮೀರ್ ಖಾನ್ ಹಾಲಿವುಡ್ ವರದಿಗಾರನಿಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಾನು ಒಂದೇ ಬಾರಿಗೆ 6 ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಇದಕ್ಕೆ ನನ್ನದೇ ಆದ ಕಾರಣಗಳಿವೆ. ವೃತ್ತಿಜೀವನದ ಕೊನೆಯ 10 ವರ್ಷಗಳು ಉಳಿದಿವೆ ಎಂದು ಅನಿಸಿತು. ಆದ್ದರಿಂದ ಈ 10 ವರ್ಷಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಚಿತ್ರಗಳಲ್ಲಿ ನಟಿಸಬೇಕು ಎಂದು ನಿರ್ಧರಿಸಿದ್ದೇನೆ ಎಂದು ಅಮೀರ್ ಖಾನ್ ವಿವರಿಸಿದರು.
ಸಂದರ್ಶನದಲ್ಲಿ ಜೊತೆಗಿದ್ದ ಮಾಜಿ ಪತ್ನಿ ಹಾಗೂ ನಿರ್ದೇಶಕಿ ಕಿರಣ್ ರಾವ್, ಅಮೀರ್ ಖಾನ್ ಅವರ ಮಾತನ್ನು ಒಪ್ಪದೇ 97 ವರ್ಷದವರೆಗೆ ಕ್ಲಿಂಟ್ ಈಸ್ಟ್ ವುಡ್ ನಟಿಸಿದ್ದನ್ನು ಉದಾಹರಣೆಯಾಗಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಮೀರ್ ಖಾನ್, ನೀವು ತುಂಬಾ ಅಪರೂಪದ ಉದಾಹರಣೆಗಳನ್ನು ಕೊಡುತ್ತಿದ್ದೀರಿ. 90 ವರ್ಷದ ಮೇಲೆ ನಟಿಸಿದವರ ಸಂಖ್ಯೆ ತೀರಾ ಕಡಿಮೆ. ನಾವು ಎಷ್ಟು ದಿನ ಬದುಕಿರುತ್ತೇವೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ನಾಳೆಯೇ ಸಾಯಬಹುದು. ಆದರೆ ನಾನು 10 ವರ್ಷ ಬದುಕಿರುತ್ತೇನೆ ಎಂದು ಭಾವಿಸಿ ಈ ಮಾತು ಹೇಳುತ್ತಿದ್ದೇನೆ ಎಂದು ಹೇಳಿದರು.
70ನೇ ವಯಸ್ಸಿಗೆ ನಾನು ಸಿನಿಮಾದಿಂದ ನಿವೃತ್ತಿ ಆಗಲು ಬಯಸಿದ್ದೇನೆ. ಈ ವಯಸ್ಸಿನಲ್ಲಿ ಮುಂದುವರಿಯುವುದಕ್ಕಿಂತ ಯುವಕರಿಗೆ ಅವಕಾಶ ಮಾಡಿಕೊಡಬೇಕು. ಬರಹಗಾರರು, ನಿರ್ದೇಶಕರ ಮೇಲೆ ಒತ್ತಡ ಹೇರದೇ ಅವರ ಕ್ರಿಯಾಶೀಲತೆಗೆ ಗೌರವ ನೀಡಬೇಕು ಎಂದು ಆಮೀರ್ ಖಾನ್ ನುಡಿದರು.