ಕೆಳ ಕ್ರಮಾಂಕದಲ್ಲಿ ಅಭಿವನ್ ಮನೋಹರ್ ಸಿಡಿಸಿದ ಅಜೇಯ ಅರ್ಧಶತಕದ ನೆರವಿನಿಂದ ಬೆಂಗಾಲ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕುಸಿದ ಕರ್ನಾಟಕ ತಂಡಕ್ಕೆ ಆಸರೆಯಾಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟವಾದ ಗುರುವಾರ ಬೆಂಗಾಲ್ ತಂಡ ಮೊದಲ ಇನಿಂಗ್ಸ್ ನಲ್ಲಿ 301 ರನ್ ಗೆ ಆಲೌಟಾಯಿತು. ನಂತರ ಆಡಲಿಳಿದ ಕರ್ನಾಟಕ ತಂಡ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿದೆ.
ಕರ್ನಾಟಕ ತಂಡ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಬೇಕಾದರೆ ಇನ್ನೂ 145 ರನ್ ಗಳಿಸಬೇಕಾದ ಒತ್ತಡದಲ್ಲಿದೆ. ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಅಗ್ರ ಕ್ರಮಾಂಕದ ವೈಫಲ್ಯದಿಂದ 97 ರನ್ ಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಯಿತು.
ಅಭಿನವ್ ಮುಕುಂದ್ ಮತ್ತು ಶ್ರೇಯಸ್ ಗೋಪಾಲ್ ಮುರಿಯದ 6ನೇ ವಿಕೆಟ್ ಗೆ 58 ರನ್ ಜೊತೆಯಾಟ ನಿಭಾಯಿಸಿದರು. ಅಭಿನವ್ 73 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 50 ರನ್ ಬಾರಿಸಿ ಅಜೇಯರಾಗಿ ಉಳಿದರೆ, ಶ್ರೇಯಸ್ ಗೋಪಾಲ್ 55 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ 23 ರನ್ ಗಳಿಸಿದರು. ಬೆಂಗಾಲ್ ಪರ ಸೂರಜ್ ಸಿಂಧು ಜೈಸ್ವಾಲ್ ಮತ್ತು ರಿಶವ್ ವಿವೇಕ್ ತಲಾ 2 ವಿಕೆಟ್ ಗಳಿಸಿದರು.
ಇದಕ್ಕೂ ಮುನ್ನ 5 ವಿಕೆಟ್ ಗೆ 249 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಬೆಂಗಾಲ್ 300ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಕರ್ನಾಟಕ ಪರ ವಾಸುಕಿ ಕೌಶಿಕ್ 5 ವಿಕೆಟ್ ಪಡೆದು ಗಮನ ಸೆಳೆದರು.