ನವದೆಹಲಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೆಚ್ಚೆಚ್ಚು ಪ್ರಬಲಗೊಂಡಂತೆ ಮನುಷ್ಯರ ಶ್ರಮ ಕಡಿಮೆ ಆಗುತ್ತದೆ. ಹಾಗೆಯೇ, ಮನುಷ್ಯರ ಉದ್ಯೋಗಕ್ಕೂ ಕುತ್ತು ಬರುತ್ತದೆ ಎನ್ನುವ ಹಲವರ ಭಯ ನಿಜವಾಗುತ್ತಿದೆ.
ಬ್ಲೂಮ್‌ಬರ್ಗ್‌ನ ವರದಿಯೊಂದರ ಪ್ರಕಾರ ಮುಂದಿನ ಮೂರರಿಂದ ಐದು ವರ್ಷದಲ್ಲಿ ಜಾಗತಿಕವಾಗಿ ೨ ಲಕ್ಷ ಬ್ಯಾಂಕ್ ಉದ್ಯೋಗಗಳು ಎಐ ಪಾಲಾಗಲಿವೆ ಎನ್ನಲಾಗಿದೆ.
ಜಾಗತಿಕವಾಗಿ ಬ್ಯಾಂಕುಗಳ ಸಿಬ್ಬಂದಿ ಸಂಖ್ಯೆಯಲ್ಲಿ ಭಾರೀ ಇಳಿಕೆ ಆಗಲು ಎಐ ಕಾರಣವಾಗಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. ಕೆಲ ಬ್ಯಾಂಕುಗಳಲ್ಲಿ ಶೇ. 5ರಿಂದ 10ರಷ್ಟು ಸಿಬ್ಬಂದಿವರ್ಗ ಸಂಖ್ಯೆ ಮೊಟಕುಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಬ್ಯಾಂಕುಗಳಲ್ಲಿ ಬ್ಯಾಕ್ ಆಫೀಸ್, ಮಿಡಲ್ ಆಫೀಸ್ ಮತ್ತು ಆಪರೇಶನ್ಸ್ ಉದ್ಯೋಗಗಳು ಎಐ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಕೆಲ ಗ್ರಾಹಕ ಸೇವೆಗಳೂ ಪರಿವರ್ತನೆ ಹೊಂದಬಹುದು.
ಎಐ ಚಾಲಿತ ಬೋಟ್‌ಗಳು ಗ್ರಾಹಕರ ಅನುಮಾನಗಳನ್ನು ಪರಿಹರಿಸುವ ವ್ಯವಸ್ಥೆ ಹೆಚ್ಚಬಹುದು. ಬ್ಯಾಂಕುಗಳ ಕೆವೈಸಿ ಕ್ರಮಗಳ ಹೊಣೆಯನ್ನು ಎಐ ಬೋಟ್ ಗಳಿಗೆ ವಹಿಸಬಹುದು ಎಂದು ಅಂದಾಜಿಸಲಾಗಿದೆ.
ಯಾಂತ್ರಿಕ, ಪುನರಾವರ್ತಿತ ಕಾರ್ಯಗಳನ್ನು ಒಳಗೊಂಡಿರುವ ಯಾವುದೇ ಉದ್ಯೋಗಗಳು ಅಪಾಯಕ್ಕೆ ಸಿಲುಕಲಿವೆ. ಈ ಉದ್ಯೋಗಗಳನ್ನು ಪೂರ್ಣವಾಗಿ ಎಐ ಕಿತ್ತುಕೊಳ್ಳುವುದಿಲ್ಲ. ಆದರೆ, ಉದ್ಯೋಗ ಸ್ವರೂಪಗಳಲ್ಲಿ ಬದಲಾವಣೆ ತರಬಲ್ಲುದು ಎಂಬುದು ಅವರ ಅನಿಸಿಕೆ.
ಜಾಗತಿಕ ಮಟ್ಟದ ಬ್ಯಾಂಕುಗಳಾದ ಸಿಟಿ ಗ್ರೂಪ್, ಜೆಪಿ ಮಾರ್ಗನ್ ಚೇಸ್, ಗೋಲ್ಡ್ ಮ್ಯಾನ್ ಸ್ಯಾಕ್ಸ್ ಗ್ರೂಪ್ ಮೊದಲಾದವು ಸೇರಿದಂತೆ 93 ಸಂಸ್ಥೆಗಳು ಈ ಸಮೀಕ್ಷೆಗೆ ಸ್ಪಂದಿಸಿವೆ.
ಶೇ.25ರಷ್ಟು ಸಂಸ್ಥೆಗಳು ಬ್ಯಾಂಕುಗಳ ಸಿಬ್ಬಂದಿ ಸಂಖ್ಯೆಯಲ್ಲಿ ಶೇ.5ರಿಂದ 10ರಷ್ಟು ಇಳಿಕೆಯಾಗಬಹುದು ಎಂಬ ಅಂದಾಜು ಮಾಡಿವೆ. ಬ್ಯಾಂಕುಗಳಲ್ಲಿ ಸಿಬ್ಬಂದಿಯ ಸಂಖ್ಯೆ ಕಡಿಮೆ ಆದರೂ ಆದಾಯ ಶೇ.12ರಿಂದ ಶೇ.17ಕ್ಕೆ ಲಾಭ ಹೆಚ್ಚಬಹುದು.
ಕೃತಕ ಬುದ್ಧಿ ತಂತ್ರಜ್ಞಾನದಿಂದ ಉತ್ಪನ್ನಶೀಲತೆ ಹೆಚ್ಚುವುದು ಇದಕ್ಕೆ ಕಾರಣವಾಗಿರುತ್ತದೆ ಎಂದು ಸಮೀಕ್ಷೆಯಲ್ಲಿ ಶೇ. 80ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.