ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದು, ಓರಲ್ ಸೆಕ್ಸ್ ಗೆ ಒತ್ತಾಯಿಸಿದ್ದಾರೆ ಎಂದು ಭಾರತೀಯ ವಾಯುಪಡೆಯ ಐಎಎಸ್ ಅಧಿಕಾರಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಎಫ್ ಐಆರ್ ದಾಖಲಾಗಿದೆ.
ವಾಯುಪಡೆಯ ಫ್ಲೈಯಿಂಗ್ ಆಫೀಸರ್ ಹುದ್ದೆ ಅಲಂಕರಿಸಿರುವ ಮಹಿಳೆ ತಮ್ಮ ಮೇಲಿನ ಅಧಿಕಾರಿ ವಿರುದ್ಧ ಜಮ್ಮು ಕಾಶ್ಮೀರದ ಬದ್ಗಾಮ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಬ್ಬರು ರಾಜಧಾನಿ ಶ್ರೀನಗರ ವಾಯುನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಾಯುಪಡೆಯ ಮಹಿಳಾ ಅಧಿಕಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ವಾಯುಪಡೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ತಲುಪಿಸಿದ್ದಾರೆ. ಇದೀಗ ವಾಯುಪಡೆ ಅಧಿಕಾರಿಗಳು ಈ ವಿಷಯದ ಕುರಿತು ಗಮನ ಹರಿಸಿದ್ದಾರೆ.
ಕಳೆದೆರಡು ವರ್ಷಗಳಿಂದ ತನ್ನ ಮೇಲೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಫ್ಲೈಯಿಂಗ್ ಆಫೀಸರ್ ದೂರಿನಲ್ಲಿ ಆರೋಪಿಸಿದ್ದಾರೆ.
2023, ಡಿಸೆಂಬರ್ 31ರಂದು ರಾತ್ರಿ ಹೊಸ ವರ್ಷದ ಸಂಭ್ರಮದ ವೇಳೆ ಕಮಾಂಡಿಂಗ್ ಆಫೀಸರ್ ತನ್ನ ಬಳಿ ಬಂದು ನಿಮಗೆ ಉಡುಗೊರೆ ಬಂದಿಲ್ಲವೇ ಎಂದು ಪ್ರಶ್ನಿಸಿದರು. ಯಾವ ಉಡುಗೊರೆ ಬಂದಿಲ್ಲ ಎಂದಾಗ ನನ್ನ ಮನೆಯಲ್ಲಿ ನಿಮ್ಮ ಉಡುಗೊರೆ ಇದೆ ಎಂದು ಆಹ್ವಾನಿಸಿದರು. ಆಗ ನಿಮ್ಮ ಮನೆಯವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದಾಗ ಅವರು ಬೇರೆ ಎಲ್ಲೋ ಇದ್ದಾರೆ ಎಂದು ಉತ್ತರಿಸಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಅವರ ಮನೆಗೆ ಹೋದಾಗ ನನ್ನ ಜೊತೆ ಓರಲ್ ಸೆಕ್ಸ್ ಗೆ ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದರು. ಕೂಡಲೇ ಅವರಿಂದ ತಪ್ಪಿಸಿಕೊಂಡು ಹೊರಗೆ ಓಡಿ ಬಂದಾಗ ಮನೆಯವರು ಮತ್ತೆ ಶುಕ್ರವಾರ ಹೊರಗೆ ಹೋಗಲಿದ್ದು, ಆಗ ಮತ್ತೆ ಭೇಟಿ ಮಾಡುವುದಾಗಿ ಹೇಳಿದರು ಎಂದು ಅವರು ಹೇಳಿದ್ದಾರೆ.
ಅವಿವಾಹಿತ ಯುವತಿಯನ್ನು ಸೇನೆಯಲ್ಲಿ ಹೀಗೆಲ್ಲಾ ನಡೆಸಿಕೊಂಡಿದ್ದು ನೋಡಿ ಆಘಾತವಾಗಿ ಮಾನಸಿಕವಾಗಿ ನೊಂದಿದ್ದೇನೆ. ಸಹದ್ಯೋಗಿಗಳ ಬಳಿ ಈ ವಿಷಯ ಹೇಳಿದಾಗ ದೂರು ನೀಡಲು ಸೂಚಿಸಿದರು ಎಂದು ಅವರು ಹೇಳಿದ್ದಾರೆ.