ಕೆಳ ಕ್ರಮಾಂಕದಲ್ಲಿ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್ ಶತಕ ಮತ್ತು ರವೀಂದ್ರ ಜಡೇಜಾ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕಳಪೆ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಗಿದೆ.
ಚೆನ್ನೈನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ.
ಬಾಂಗ್ಲಾದ ಮಧ್ಯಮ ವೇಗಿ ಹಸನ್ ಮುಹಮದ್ ಮಾರಕ ದಾಳಿಗೆ ತತ್ತರಿಸಿದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಅಲ್ಪ ಮೊತ್ತಕ್ಕೆ ನಿರ್ಗಮಿಸಿದರು. ನಾಯಕ ರೋಹಿತ್ ಶರ್ಮ (6), ಶುಭಮನ್ ಗಿಲ್ (0) ಮತ್ತು ವಿರಾಟ್ ಕೊಹ್ಲಿ (6) ಎರಡಂಕಿಯ ಮೊತ್ತವನ್ನೂ ದಾಟದೇ ನಿರ್ಗಮಿಸಿದರು.
ಭಾರತ ತಂಡ 34 ರನ್ ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದರೂ ಆರಂಭಿಕ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ನಾಲ್ಕನೇ ವಿಕೆಟ್ ಗೆ 62 ರನ್ ಜೊತೆಯಾಟದಿಂದ ತಂಡದ ಕುಸಿತವನ್ನು ತಡೆದರು. ಜೈಸ್ವಾಲ್ 118 ಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ 56 ರನ್ ಬಾರಿಸಿದರೆ, ಪಂತ್ 52 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡ 39 ರನ್ ಬಾರಿಸಿ ನಿರ್ಗಮಿಸಿದರು. ಆಗ ಭಾರತದ ಮೊತ್ತ 6 ವಿಕೆಟ್ ಗೆ 144 ರನ್ ಆಗಿತ್ತು.