ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವವನ್ನು ಜನವರಿ 11 ರಿಂದ 13ರವರೆಗೆ ಆಚರಿಸಲು ತೀರ್ಮಾನಿಸಲಾಗಿದೆ.
ಕಳೆದ ವರ್ಷ ಪ್ರತಿಪ್ಠಾಪನೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದ ಜನರಿಗೆ, ವಾರ್ಷಿಕೋತ್ಸವದ ಆಚರಣೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ ಎಂದು ಟ್ರಸ್ಟ್ ಹೇಳಿದೆ.
ಅಂಗದ ಟೀಲಾ ಪ್ರದೇಶದಲ್ಲಿ ಜರ್ಮನ್ ಹ್ಯಾಂಗರ್ ಟೆಂಟ್ ನಿರ್ಮಿಸಲಾಗಿದೆ. ಇದು 5000 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಮಂಟಪ ಮತ್ತು ಯಜ್ಞಶಾಲೆಯಲ್ಲಿ ಶಾಸ್ತ್ರೀಯ ಸಾಂಸ್ಕೃತಿಕ ಪ್ರದರ್ಶನಗಳು, ಆಚರಣೆಗಳು ಮತ್ತು ಪ್ರವಚನಗಳನ್ನು ಒಳಗೊಂಡ ಕಾರ್ಯಕ್ರಮವನ್ನು ವೀಕ್ಷಿಸಲು ಸಾಮಾನ್ಯ ಜನರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು 110 ವಿಐಪಿಗಳು ಸೇರಿದಂತೆ ಇತರ ಗಣ್ಯ ಅತಿಥಿಗಳು, ಸಂತರಿಗೆ ಆಮಂತ್ರಣ ಪತ್ರಗಳನ್ನು ನೀಡಲಾಗಿದೆ ಎಂದು ರಾಯ್ ಹೇಳಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ನಿವಾಸಿಗಳು ಮತ್ತು ಯಾತ್ರಾರ್ಥಿಗಳು ಭಾಗವಹಿಸುವಂತೆ ರಾಯ್ ಮನವಿ ಮಾಡಿದ್ದಾರೆ.
2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಕುಂಭಕ್ಕೆ ಭರದ ಸಿದ್ಧತೆ
ಉತ್ತರ ಪ್ರದೇಶದ ಪ್ರಯಾಗ್ರಾಜ್ ಜಿಲ್ಲೆಯಲ್ಲಿ ಮಹಾಕುಂಭ ೨೦೨೫ ರ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಪ್ರಪಂಚದಾದ್ಯಂತದ 40 ಕೋಟಿ ಭಕ್ತರನ್ನು ಸ್ವಾಗತಿಸಲು ನಗರವು ಸಜ್ಜಾಗಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ದೊಡ್ಡ ಮಟ್ಟದಲ್ಲಿ ಸಿದ್ಧತೆ ಆರಂಭಿಸಿದೆ.
ಮಹಾಕುಂಭಕ್ಕೆ 40 ಕೋಟಿ ಭಕ್ತರು ಬರುವ ಸಾಧ್ಯತೆಯಿದೆ ಮತ್ತು ಇದು ಉತ್ತರ ಪ್ರದೇಶಕ್ಕೆ 2 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಬೆಳವಣಿಗೆಯನ್ನು ತರುವ ನಿರೀಕ್ಷೆಯಿದೆ ಎಂದು ಬಹಿರಂಗಪಡಿಸಿದ್ದಾರೆ.
ಮಹಾಕುಂಭವು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆ, ಇದು ಭಾರತ ಸೇರಿದಂತೆ ಇಡೀ ಜಗತ್ತಿಗೆ ತನ್ನ ಪ್ರಾಚೀನ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡಲು ಮತ್ತು ಅದರ ಸಾಂಸ್ಕೃತಿಕ ಬೇರುಗಳನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ ಎಂದು ಸಿಎಂ ಯೋಗಿ ಹೇಳಿದ್ದಾರೆ.