ಅನಾರೋಗ್ಯದ ಕಾರಣ ಆಸ್ಪತ್ರೆಗೆ ಬಂದಿದ್ದ ಯುವತಿಗೆ ಕುಡಿದ ಮತ್ತಿನಲ್ಲಿದ್ದ ವೈದ್ಯ ಹಾಗೂ ಪುರುಷ ನರ್ಸ್ 5 ಬಾರಿ ಇಂಜೆಕ್ಷನ್ ನೀಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ನವೆಂಬರ್ 3ರಂದು ಈ ಘಟನೆ ನಡೆದಿದ್ದು ವೇಳೆ ಡಾ.ಪ್ರದೀಪ್ ಹಾಗೂ ಪುರುಷ ನರ್ಸ್ ಮಹೇಂದ್ರ ಯುವತಿ ದೂರು ನೀಡುತ್ತಿದ್ದಂತೆ ಪರಾರಿಯಾಗಿದ್ದಾರೆ.
ಜ್ವರ ಇದ್ದ ಕಾರಣ ಯುವತಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದರು. ಈ ವೇಳೆ ವೈದ್ಯ ಡಾ.ಪ್ರದೀಪ್ ಹಾಗೂ ಪುರುಷ ನರ್ಸ್ ಮಹೇಂದ್ರ ಕುಡಿದ ಮತ್ತಿನಲ್ಲಿದ್ದರು. ಜ್ವರ ಇರುವ ಕಾರಣ ಇಂಜೆಕ್ಷನ್ ಕೊಡ್ತೀವಿ ಅಂತ ಇಬ್ಬರೂ ಪೈಪೋಟಿಯ ಮೇಲೆ ಆಕೆಯ ಮೇಲೆ ಬಿದ್ದು ಎಲ್ಲೆಂದರಲ್ಲಿ ಇಂಜೆಕ್ಷನ್ ಚುಚ್ಚಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ.
ತಕ್ಷಣ ಯುವತಿಯ ಪೋಷಕರು ಕುಡಿದು ಬಂದಿದ್ದೀರಾ ಎಂದು ವೈದ್ಯ ಹಾಗೂ ನರ್ಸ್ ಮಹೇಂದ್ರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರಿಗೆ ದೂರು ಕೊಡ್ತೀವಿ ಅಂದ ತಕ್ಷಣ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.