ನವದೆಹಲಿ:ಪುರಾತನ ಭಾರತೀಯ ಗ್ರಂಥಗಳಾದ ಭಗವದ್ಗೀತೆ ಮತ್ತು ನಾಟ್ಯಶಾಸ್ತ್ರವನ್ನು ಯುನೆಸ್ಕೋ ತನ್ನ ವಿಶ್ವ ನೋಂದಣಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ.
ಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್ʼನಲ್ಲಿ ಈ ಎರಡು ಪ್ರಮುಖ ಗ್ರಂಥಗಳನ್ನು ಯುನೆಸ್ಕೋ ಸೇರ್ಪಡೆಗೊಳಿಸಲಾಗಿದೆ. ಇದು ಭಾರತೀಯರ ಪಾಲಿನ ಮರೆಯಲಾಗದ ಹೆಮ್ಮೆ ಪಡುವ ಕ್ಷಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಪ್ರಪಂಚದಾದ್ಯಂತದ ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣವಾಗಿದೆ. ಈ ಸೇರ್ಪಡೆ ನಮ್ಮ ಕಾಲಾತೀತ ಬುದ್ಧಿವಂತಿಕೆ ಮತ್ತು ಶ್ರೀಮಂತ ಸಂಸ್ಕೃತಿಯ ಜಾಗತಿಕ ಮನ್ನಣೆಯಾಗಿದೆ. ಗೀತೆ ಮತ್ತು ನಾಟ್ಯಶಾಸ್ತ್ರವು ಶತಮಾನಗಳಿಂದ ನಾಗರಿಕತೆ ಮತ್ತು ಪ್ರಜ್ಞೆಯನ್ನು ಪೋಷಿಸಿವೆ. ಅವರ ಒಳನೋಟಗಳು ಜಗತ್ತಿಗೆ ಸ್ಫೂರ್ತಿ ನೀಡುತ್ತಲೇ ಇವೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆಗೊಳಿಸಿರುವುದು ಭಾರತದ ನಾಗರಿಕ ಪರಂಪರೆಗೆ ಐತಿಹಾಸಿಕ ಕ್ಷಣ. ಈ ಜಾಗತಿಕ ಗೌರವವು ಭಾರತದ ಶಾಶ್ವತ ಬುದ್ಧಿವಂತಿಕೆ ಮತ್ತು ಕಲಾತ್ಮಕ ಪ್ರತಿಭೆಗೆ ಸಾಕ್ಷಿಯಾಗಿದೆ.
ಇದು ಭಾರತದ ವಿಶ್ವದೃಷ್ಟಿಕೋನ, ನಾವು ಯೋಚಿಸುವ, ಅನುಭವಿಸುವ, ಬದುಕುವ ತಾತ್ವಿಕ ಮತ್ತು ಸೌಂದರ್ಯಕ್ಕೆ ಅಡಿಪಾಯಗಳಾಗಿವೆ. ನಾವೀಗ ಅಂತಾರಾಷ್ಟ್ರೀಯ ನೋಂದಣಿಯಲ್ಲಿ ನಮ್ಮ ದೇಶದಿಂದ 14 ಶಾಸನಗಳನ್ನು ಹೊಂದಿದ್ದೇವೆ’ ಎಂದು ತಿಳಿಸಿದ್ದಾರೆ.


