ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ನಡೆಯುತ್ತಿರುವ ವೇಳೆ ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಅಭ್ಯರ್ಥಿ ಓಡಿ ಹೋದ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಗಾರ್ಬೆಟಾದ ಮಂಗಳಪೋಟಾ ಎಂಬಲ್ಲಿ ನಡೆದಿದೆ.
ಶನಿವಾರ ನಡೆದ ಮತದಾನದ ವೇಳೆ ಈ ಘಟನೆ ನಡೆದಿದ್ದು, ಮತಗಟ್ಟೆ ಹೊರಗೆ ಮತದಾನಕ್ಕೆ ಯತ್ನಿಸಿದ ವಿಷಯದಲ್ಲಿ ಘರ್ಷಣೆ ಆರಂಭವಾಗಿದ್ದು, ಈ ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಬಿಜೆಪಿ ಅಭ್ಯರ್ಥಿ ಪ್ರಣತ್ ತುಡು ಹಾಗೂ ಅವರ ಭದ್ರತಾ ಸಿಬ್ಬಂದಿ ಮತ್ತು ಕಾರ್ಯಕರ್ತರು ಓಡಿ ಹೋಗಿದ್ದಾರೆ.
ಮತದಾನದ ವೇಳೆ ಪ್ರತಿಭಟನೆ ನಡೆಸುತ್ತಿದ್ದವರ ಬಳಿ ಬಿಜೆಪಿ ಅಭ್ಯರ್ಥಿ ಪ್ರಣತ್ ತುಡು ಭದ್ರತಾ ಸಿಬ್ಬಂದಿ ಜೊತೆ ಭೇಟಿ ನೀಡಲು ಹೋದಾಗ ಆಕ್ರೋಶಗೊಂಡ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಆಘಾತಗೊಂಡ ಪ್ರಣತ್ ತುಡು ಹಾಗೂ ಭದ್ರತಾ ಸಿಬ್ಬಂದಿ ಓಡಿ ಹೋಗಿ ಪಾರಾಗಲು ಯತ್ನಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ಅಭ್ಯರ್ಥಿಯನ್ನು ಕೆಲವರು ಬೆಂಬತ್ತಿ ಕಲ್ಲು ತೂರಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿಗೆ ಬಡಿದಿಲ್ಲವಾದರೂ ಅವರ ಸಮೀಪದಲ್ಲಿದ್ದ ಭದ್ರತಾ ಸಿಬ್ಬಂದಿಗೆ ಬಡಿದಿದೆ.
ನನ್ನ ಮೇಲೆ ಕಲ್ಲು ತೂರಾಟಕ್ಕೆ ತೃಣಮೂಲ ಕಾಂಗ್ರೆಸ್ ಕಾರಣ. ಕಲ್ಲು ತೂರಾಟದಿಂದ ನನ್ನ ಭದ್ರತಾ ಸಿಬ್ಬಂದಿಯ ಇಬ್ಬರಿಗೆ ಗಾಯಗಳಾಗಿವೆ ಎಂದು ಬಿಜೆಪಿ ಅಭ್ಯರ್ತಿ ತುಡು ಆರೋಪಿಸಿದ್ದಾರೆ.
ಗಾರ್ಬೆಟಾದ ಕೆಲವು ಮತಗಟ್ಟೆಗಳಲ್ಲಿ ಬಿಜೆಪಿ ಏಜೆಂಟ್ ಗಳಿಗೆ ಮತಗಟ್ಟೆ ಬಳಿ ಪ್ರವೇಶ ದೊರೆಯದಂತೆ ತಡೆಯಲಾಗಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಸ‍್ಥಳಕ್ಕೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ ಎಂದು ಅವರು ಆರೋಪಿಸಿದ್ದಾರೆ.