ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ವೇಳೆ ಉಂಟಾದ ನೂಕುನುಗ್ಗಲಿನಿಂದ ಬಿಜೆಪಿ ಶಾಸಕಿ ರೈಲ್ವೆ ಹಳಿ ಮೇಲೆ ಬಿದ್ದ ಘಟನೆ ಸೋಮವಾರ ಸಂಭವಿಸಿದೆ.
ಆಗ್ರಾ-ವಾರಣಾಸಿ ನಡುವಣ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ಸಿಗ್ನಲ್ ನೀಡಲು ನಿಂತಿದ್ದಾಗ ಎತ್ವಾಹ್ ಕ್ಷೇತ್ರದ ಬಿಜೆಪಿ ಶಾಸಕಿ ಸರಿತಾ ಬಹದ್ದೂರಿಯಾ ರೈಲಿನ ಮುಂದೆಯೇ ಹಳಿ ಮೇಲೆ ಬಿದ್ದಿದ್ದಾರೆ.
ಸೋಮವಾರ ಸಂಜೆ 6 ಗಂಟೆಗೆ ರೈಲಿಗೆ ಚಾಲನೆ ನೀಡಲು ಹಸಿರು ಬಾವುಟ ಹಿಡಿದು ಕೇಂದ್ರ ಸಚಿವರ ಜೊತೆ ನಿಂತಿದ್ದ 61 ವರ್ಷದ ಶಾಸಕಿ ಸರಿತಾ ಬಹದ್ದೂರಿಯಾ ನೂಕುನುಗ್ಗಲಿನಿಂದ ಆಯತಪ್ಪಿ ಹಳಿ ಮೇಲೆ ಬಿದ್ದಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಆಗ್ರಾ-ವಾರಣಾಸಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದು, ಸ್ಥಳದಲ್ಲಿದ್ದ ಕೇಂದ್ರ ರೈಲ್ವೆ ಸಚಿವ ರವನೀತ್ ಸಿಂಗ್ ಬಿಟ್ಟು ಗ್ರೀನ್ ಸಿಗ್ನಲ್ ನೀಡಿದರು.
ಶಾಸಕಿ ಕೆಳಗೆ ಆಯತಪ್ಪಿ ಬಿದ್ದ ಕೂಡಲೇ ನೆರವು ನೀಡಿ ಅವರನ್ನು ಮೇಲಕ್ಕೆ ಎತ್ತಲಾಯಿತು. ಘಟನೆಯಲ್ಲಿ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಕಾರ್ಯಕ್ರಮ ಮುಗಿದ ಕೂಡಲೇ ಅವರು ಮನೆಗೆ ತೆರಳಿ ವಿಶ್ರಾಂತಿ ಪಡೆದಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
https://twitter.com/ians_india/status/1835682962936930439