ಸಚಿವ ಜಮೀರ್ ಅಹ್ಮದ್ ಖಾನ್ ಕರಿಯ ಎಂದು ವೈಯಕ್ತಿಕವಾಗಿ ನಿಂದಿಸಿದ್ದರಿಂದ ಉಪ ಚುನಾವಣೆಯ ಮತದಾನದಲ್ಲಿ ನಷ್ಟ ಆಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಚುನಾವಣೆಯ ನಂತರ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಜಮೀರ್ ವೈಯಕ್ತಿಕ ನಿಂದನೆ ಮಾಡಿದ್ದರಿಂದ ಒಂದು ಸಮುದಾಯದ ಮತ ಬರಲಿಲ್ಲ. ಇದರಿಂದ ಸೋಲಾಗುತ್ತೆ ಎಂದು ಹೇಳುವುದಿಲ್ಲ. ಬದಲಾಗಿ ಸಮಬಲದ ಹೋರಾಟ ಆಗಿದೆ ಎಂದರು.
ಈ ಚುನಾವಣೆಯಲ್ಲಿ ಗೆದ್ದರೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಸಾಧನೆಯಿಂದ ಗೆಲುವು ದೊರೆಯಲಿದೆ. ಒಂದು ವೇಳೆ ಸೋತರೆ ನಾನು ಪಕ್ಷಾಂತರ ಮಾಡಿದ್ದಕ್ಕೆ ಜನರು ಬೇಸರಗೊಂಡಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದೈತ್ಯ ಶಕ್ತಿ ಆಗಿದ್ದಾರೆ. ಅವರು ಕೂಡ ನನ್ನ ವಿರುದ್ಧ ಪ್ರಚಾರಕ್ಕೆ ಬಂದಿದ್ದಾರೆ. ಇದರಿಂದ ಮತಗಳು ಚದುರುವ ಸಾಧ್ಯತೆ ಇದೆ. ಆದರೆ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವುದರಿಂದ ಇದು ನನ್ನ ಪಾಲಿಗೆ ಒಳ್ಳೆಯದಾಗಬಹುದು ಎಂದು ಯೋಗೇಶ್ವರ್ ಅಭಿಪ್ರಾಯಪಟ್ಟರು.